ಖಾನಾಪುರ: ನಮ್ಮ ಕಾಲದಲ್ಲಿ ಸೌಲಭ್ಯಗಳ ಕೊರತೆಯ ಕಾರಣ ಎಸ್ಸೆಸ್ಸೆಲ್ಸಿ ನಂತರದ ಉನ್ನತ ಶಿಕ್ಷಣವನ್ನು ಬಹಳ ಕಷ್ಟಪಟ್ಟು ಪಡೆಯಬೇಕಾಗಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಪಡೆಯಲು ಕಷ್ಟ ಪಡಬೇಕಿಲ್ಲ. ಈಗ ಪದವಿಯವರೆಗಿನ ಶಿಕ್ಷಣವನ್ನು ಹೋಬಳಿ ಮಟ್ಟದಲ್ಲೇ ಪಡೆಯುವ ವ್ಯವಸ್ಥೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಪದವಿಯವರೆಗಿನ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯುತ್ತಿದ್ದಾರೆ ಎಂದು ಶಾಸಕ ವಿಠಲ ಹಲಗೇಕರ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜಿನ 2026-27 ಶೈಕ್ಷಣಿಕ ವರ್ಷದ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್, ಸೌಟ್ಸ್, ರೆಡ್ಕ್ರಾಸ್ ಮತ್ತು ರೆಡ್ ರಿಬ್ಬನ್ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪದವಿ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಬೆಳಗಾವಿ ಅಥವಾ ಧಾರವಾಡಕ್ಕೆ ತೆರಳುವ ಅನಿವಾರ್ಯತೆಯಿದ್ದು, ಇದನ್ನು ತಪ್ಪಿಸಲು ಮುಂದಿನ ವರ್ಷದಿಂದಲೇ ಇಲ್ಲಿ ಸ್ನಾತಕೋತ್ತರ ಶಿಕ್ಷಣ ಸಂಸ್ಥೆ ಆರಂಭಿಸಲು ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಸಿ.ವಿ. ಪಾಟೀಲ ಮಾತನಾಡಿ, ‘ಭಾರತೀಯ ಸೈನ್ಯ ಸೇರಿ ದೇಶಸೇವೆ ಮಾಡಲು ಇಂದಿನ ಯುವಕ-ಯುವತಿಯರಿಗೆ ವಿಪುಲ ಅವಕಾಶಗಳಿವೆ. ಎನ್.ಸಿ.ಸಿ ಘಟಕದ ಮೂಲಕ ಸೇನೆಯನ್ನು ಸೇರಲು ಅವಕಾಶವಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಎನ್.ಸಿ.ಸಿ ಘಟಕವನ್ನು ಆರಂಭಿಸಲಾಗುವುದು’ ಎಂದರು.
ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕನ್ನು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರನ್ನು ಸತ್ಕರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ತಾಬೋಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರವೀಣ ಕೋರ್ಬು, ಎಂ.ಕೆ. ಬಾಳಿಕಾಯಿ, ಮುಜಾವರ ಜೆ.ಎನ್, ಸಾಗರ ಮೋಟಣಕರ, ಡಾ.ರೇಷ್ಮಾ ಸದಲಗೆ, ಡಾ.ಗೀತಾ ಶಿವಪೂಜಿ, ಡಾ.ಅಲಕಾ ಕಿರಣೆ, ಸಂಧ್ಯಾ ಹಂದಿಗೋಳ, ವಿಠಲ ಹೊಸೂರ, ಎ.ಬಿ ಮುರಗೋಡ, ಎಸ್.ಬಿ ಮೊರಬ, ಆರ್.ಡಿ ರಾಯ್ಕಾ, ಅಪ್ಪಯ್ಯ ಕೋಡೊಳಿ, ಜಾರ್ಡ ಗೋನ್ಸಾಲ್ವಿಸ್, ಪ್ರಕಾಶ ನಿಲಜಕರ, ಭರತ ತಿರವೀರ, ಉಪನ್ಯಾಸಕರಾದ ಡಾ.ಅಂಬರೀಷ ರೇವತಗಾಂವ, ಡಾ.ಸೋನಲ್ ರೇವಣಕರ, ಶಾಂತಾ ಬಂಗಾರಿ, ಡಾ.ವಿದ್ಯಾ ಜೀರಗೆ, ಡಾ.ಪಾರೀಸ ಪಾಟೀಲ, ಡಾ.ವಿಜಯಲಕ್ಷ್ಮೀ ಕಲಪತ್ರಿ ಉಪಸ್ಥಿತರಿದ್ದರು.


,


















