| Latest Version 9.0.7 |

State News

ನಾನು ಬದುಕಲ್ಲ ಎಂದು ಅನ್ಸಿತ್ತು..ಆದ್ರೆ ಪ್ರಯಾಣಿಕರ ಉಳಿಸಲು ಹೋರಾಡ್ಲೇಬೇಕಿತ್ತು’: ಫ್ಲೈದುಬೈ ದಾಳಿಯ ಭೀಕರ ಕ್ಷಣ ಬಿಚ್ಚಿಟ್ಟ ಪೈಲಟ್‌ ಸ್ಮಿತ್ ಮಚ್ಚಾರ್

ದುಬೈ: ವಿಮಾನದ ಪ್ರಯಾಣಿಕರನ್ನು ರಕ್ಷಿಸಲು ತಾನು ಪ್ರಯತ್ನಿಸುತ್ತಿದ್ದಾಗ ತನ್ನ ಜೀವಕ್ಕೇ ಅಪಾಯ ಎದುರಾಗಿದ್ದ ಭೀಕರ ಕ್ಷಣಗಳನ್ನು ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ನೆನಪಿಸಿಕೊಂಡಿದ್ದಾರೆ. ದಾಳಿಯ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪ್ರಜ್ಞೆ ತಪ್ಪಿ ಮತ್ತೆ ಎಚ್ಚರವಾಗುತ್ತಿದ್ದ ಆ ಕ್ಷಣಗಳಲ್ಲಿ ಬದುಕುಳಿಯಬೇಕಾದರೆ ತಕ್ಷಣ ಏನಾದರೂ ಮಾಡಲೇಬೇಕು ಎಂಬ ಅರಿವು ಮೂಡಿತ್ತು ಎಂದು ಅವರು ಹೇಳಿದ್ದಾರೆ.
ಸ್ಕೈ ನ್ಯೂಸ್ ಅರೇಬಿಯಾ (Sky News Arabia) ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಮಿತ್‌ ಮಚ್ಚಾರ್, ದಾಳಿಯ ಸಂದರ್ಭದಲ್ಲಿ ತಾವು ಅನುಭವಿಸಿದ ಭಯ, ಗೊಂದಲ ಮತ್ತು ಅನಿಶ್ಚಿತತೆ ಬಗ್ಗೆ ವಿವರಿಸಿದ್ದಾರೆ. ಈ ಸಂಕಷ್ಟದ ನಡುವೆ ಇನ್ನೊಬ್ಬ ಸಹೋದ್ಯೋಗಿ ಕಾಕ್‌ಪಿಟ್‌ನಲ್ಲಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ನೆರವಾದ ಸಂಗತಿಯನ್ನೂ ಅವರು ಸ್ಮರಿಸಿದ್ದಾರೆ.

‘ಏನಾದ್ರೂ ಮಾಡದಿದ್ರೆ ಬದುಕುಳಿಯಲು ಸಾಧ್ಯವಿಲ್ಲವೆಂದು ಅರಿವಾಯಿತು’
ದಾಳಿಯ ಸಂದರ್ಭದಲ್ಲಿ ಒಂದು ಹಂತದಲ್ಲಿ ತಾವು ಬದುಕುಳಿಯುವುದಿಲ್ಲವೇನೋ ಎಂಬ ಭಯ ಕಾಡಿತ್ತು ಎಂದು ಮಚ್ಚಾರ್ ಹೇಳಿದ್ದಾರೆ. ಆದರೆ, ಆ ಕ್ಷಣದಲ್ಲಿ ಸುಮ್ಮನೆ ಕುಳಿತುಕೊಳ್ಳುವಂತಿರಲಿಲ್ಲ. ಪರಿಸ್ಥಿತಿಯನ್ನು ಬದಲಿಸಲು ಏನಾದರೂ ಮಾಡಲೇಬೇಕೆಂಬ ಆಲೋಚನೆ ಮೂಡಿತ್ತು ಎಂದು ಅವರು ತಿಳಿಸಿದ್ದಾರೆ.
ತಾನು ಬದುಕುಳಿಯುವುದಿಲ್ಲ ಎಂದು ಅನ್ನಿಸಿದ ಕ್ಷಣವೊಂದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹೌದು, ಅಂತಹ ಕ್ಷಣವೊಂದಿತ್ತು ಎಂದು ಹೇಳಿದ್ದಾರೆ. “ಹೌದು, ನನಗೆ ಆ ವಿಷಯ ಅರಿವಾದ ಒಂದು ಕ್ಷಣವಿತ್ತು,” ಎಂದು ಹೇಳಿದ ಅವರು, ಆ ಸಂದರ್ಭದಲ್ಲಿ ತನಗೆ ತಾನೇ, “ಸ್ಮಿತ್, ಏನಾದ್ರೂ ಮಾಡು, ನೀನು ಹೀಗೆ ಸಾಯಲು ಸಾಧ್ಯವಿಲ್ಲ,” ಎಂದು ಹೇಳಿಕೊಂಡಿದ್ದನ್ನು ನೆನಪಿಸಿಕೊಂಡರು.
“ಹೌದು, ಒಂದು ಕ್ಷಣದಲ್ಲಿ ನನಗೆ ಆ ಅರಿವಾಯಿತು. ಏನಾದರೂ ಮಾಡಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ನಾನು ನನ್ನ ಸಾವನ್ನು ಒಪ್ಪಿಕೊಂಡಿದ್ದೆ ಎಂದು ಹೇಳುತ್ತಿಲ್ಲ. ಏನಾದರೂ ಮಾಡು, ಇಲ್ಲದಿದ್ದರೆ…” ಎಂದು ಆ ಕ್ಷಣವನ್ನು ಅವರು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಬದುಕುಳಿಯಬೇಕೆಂಬ ತಮ್ಮ ಹೋರಾಟ ಕೇವಲ ನನ್ನ ಜೀವವನ್ನು ಉಳಿಸಿಕೊಳ್ಳುವುದಕ್ಕೆ ಸೀಮಿತವಾಗಿರಲಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಯೂ ತನ್ನ ಜವಾಬ್ದಾರಿಯಾಗಿತ್ತು ಎಂಬುದನ್ನು ಮಚ್ಚಾರ್ ಹೇಳಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿವಾದಾಗ ಜೀವ ಉಳಿಸಲು ತಕ್ಷಣ ಪ್ರಯತ್ನ ಮಾಡುವುದು ಅನಿವಾರ್ಯವಾಗಿತ್ತು ಎಂದು ಅವರು ವಿವರಿಸಿದ್ದಾರೆ.

ತಲೆಗೆ ಬಲವಾದ ಪೆಟ್ಟು; ಪ್ರಜ್ಞೆ ತಪ್ಪಿ ಮತ್ತೆ ಎಚ್ಚರ
ದಾಳಿಯ ವೇಳೆ ತಲೆಗೆ ಬಲವಾಗಿ ಹೊಡೆತ ಬಿದ್ದಿದ್ದನ್ನು ಕ್ಯಾಪ್ಟನ್ ಮಚ್ಚಾರ್‌ ನೆನಪಿಸಿಕೊಂಡಿದ್ದಾರೆ. ಆ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ, ತಾವು ಪ್ರಜ್ಞೆ ಕಳೆದುಕೊಳ್ಳುತ್ತಾ ಮತ್ತೆ ಎಚ್ಚರವಾಗುತ್ತಿದ್ದ ಪರಿಸ್ಥಿತಿಯಲ್ಲಿ ಇದ್ದುದಾಗಿ ಹೇಳಿದ್ದಾರೆ.
“ನಾನು ನನ್ನ ಕೆಲಸ ಮಾಡುತ್ತಿದ್ದೆ. ಆಗ ನನ್ನ ತಲೆಗೆ ಬಲವಾದ ಪೆಟ್ಟು ಬಿತ್ತು. ಯಾವುದೋ ಅತ್ಯಂತ ಬಲವಾದ ವಸ್ತು ಬಡಿದಂತಾಯಿತು. ನಾನು ಪ್ರಜ್ಞೆ ಕಳೆದುಕೊಳ್ಳುತ್ತಾ ಮತ್ತೆ ಎಚ್ಚರವಾಗುತ್ತಿದ್ದೆ” ಎಂದು ಅವರು ತಿಳಿಸಿದ್ದಾರೆ. ತನ್ನ ಮೇಲೆ ನಡೆದ ದಾಳಿಯ ಬಳಿಕ ಕಾಕ್‌ಪಿಟ್‌ ಬಾಗಿಲು ತೆರೆದಾಗ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸುವುದೇ ಕಷ್ಟವಾಗಿತ್ತು. ನಾನು ನೆಲಕ್ಕೆ ಮುಖಮಾಡಿ ಬಿದ್ದಿದ್ದ ದೃಶ್ಯ ನೆನಪಿದೆ. ಆ ಸಂದರ್ಭದಲ್ಲಿ ಜನರು ಕಿರುಚುತ್ತಿದ್ದದ್ದು, ಸುತ್ತಲೂ ಆವರಿಸಿದ್ದ ಆತಂಕ ಮತ್ತು ಗೊಂದಲ ಮನಸ್ಸಿನಲ್ಲಿ ಉಳಿದಿವೆ ಎಂದು ಅವರು ಹೇಳಿದ್ದಾರೆ.
“ಬಾಗಿಲು ತೆರೆದಾಗ ಅಲ್ಲಿ ಸಂಪೂರ್ಣ ವಿಭಿನ್ನವಾದ ದೃಶ್ಯವಿತ್ತು. ನಾನು ನೆಲಕ್ಕೆ ಮುಖಮಾಡಿ ಬಿದ್ದಿದ್ದೆ ಎಂಬುದು ನೆನಪಿದೆ. ಅಲ್ಲಿ ಭಯದ ವಾತಾವರಣವಿತ್ತು, ಜನರು ಕಿರುಚುತ್ತಿದ್ದರು” ಎಂದು ಅಂದಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಸಂಕಷ್ಟದ ನಡುವೆ ಪ್ರಾರ್ಥನೆ ಆರಂಭಿಸಿದ ಸಹಪೈಲಟ್
ದಾಳಿಯ ಸಂದರ್ಭದಲ್ಲಿ ಮತ್ತೊಬ್ಬ ಪೈಲಟ್ ತೋರಿದ ಪ್ರತಿಕ್ರಿಯೆಯನ್ನೂ ಮಚ್ಚಾರ್ ನೆನಪಿಸಿಕೊಂಡಿದ್ದಾರೆ. ಆ ಪೈಲಟ್ ಪ್ರಾರ್ಥನೆ ಮಾಡಲಾರಂಭಿಸಿದ್ದರು. ಆದರೆ, ಅವರು ಪ್ರಾರ್ಥಿಸುತ್ತಿದ್ದಾಗ ತಾನು ಅವರತ್ತ ನೋಡಲಿಲ್ಲ ಎಂದು ಮಚ್ಚಾರ್ ಹೇಳಿದ್ದಾರೆ.
ಸಂಕಷ್ಟದ ಆ ಕ್ಷಣಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದರು. ಸುತ್ತಲೂ ಭಯ ಮತ್ತು ಗೊಂದಲದ ವಾತಾವರಣವಿದ್ದರೂ, ತಮ್ಮ ಜವಾಬ್ದಾರಿಯತ್ತ ಗಮನಹರಿಸಲು ಪ್ರಯತ್ನಿಸುತ್ತಿದ್ದುದಾಗಿ ಕ್ಯಾಪ್ಟನ್ ವಿವರಿಸಿದ್ದಾರೆ.

‘ಆ ನೆನಪು ಸಾಯುವವರೆಗೂ ನನ್ನೊಂದಿಗಿರುತ್ತದೆ’
ಈ ಘಟನೆಯ ಸಂದರ್ಭದಲ್ಲಿ ತಮ್ಮ ಮತ್ತೊಬ್ಬ ಸಹೋದ್ಯೋಗಿ ವಹಿಸಿದ ಪಾತ್ರವನ್ನು ಮಚ್ಚಾರ್ ವಿಶೇಷವಾಗಿ ಸ್ಮರಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಆ ಸಹೋದ್ಯೋಗಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ನೆರವಾದದ್ದು ಮಹತ್ವದ ಸಂಗತಿಯಾಗಿತ್ತು ಎಂದು ಅವರು ಹೇಳಿದ್ದಾರೆ.
“ನನ್ನ ಮತ್ತೊಬ್ಬ ಸಹೋದ್ಯೋಗಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಮತ್ತೊಮ್ಮೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಆ ಸಂಗತಿಯನ್ನು ನಾನು ಸಾಯುವವರೆಗೂ ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ” ಎಂದು ಮಚ್ಚಾರ್ ಭಾವುಕರಾಗಿ ಹೇಳಿದ್ದಾರೆ.
ದಾಳಿಯ ವೇಳೆ ಎದುರಾದ ಭಯ ಮತ್ತು ಅನಿಶ್ಚಿತತೆಯ ನಡುವೆಯೂ ತಕ್ಷಣ ನಿರ್ಧಾರ ಕೈಗೊಳ್ಳುವುದು ಹಾಗೂ ಸಹೋದ್ಯೋಗಿಗಳ ನಡುವೆ ಮೂಡುವ ಪರಸ್ಪರ ಸಹಕಾರ ಎಷ್ಟು ಮುಖ್ಯ ಎಂಬುದನ್ನು ಕ್ಯಾಪ್ಟನ್ ಅವರ ಅನುಭವ ತೆರೆದಿಡುತ್ತದೆ. ಘಟನೆಯ ನೆನಪುಗಳನ್ನು ಇನ್ನೂ ಮನಸ್ಸಿನಲ್ಲಿ ಹೊತ್ತುಕೊಂಡಿರುವ ಅವರು, ಸಂಕಷ್ಟದ ಸಂದರ್ಭದಲ್ಲಿ ವಿಮಾನದ ನಿಯಂತ್ರಣ ವಹಿಸಿಕೊಂಡ ಸಹೋದ್ಯೋಗಿಯ ನೆರವನ್ನು ತಮ್ಮ ಜೀವನದುದ್ದಕ್ಕೂ ಮರೆಯಲು ಸಾಧ್ಯವಿಲ್ಲ ಎಂಬುದನ್ನು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

Team Udayaprabha
";