ಬದಿಯಡ್ಕ: ಪಂಚಮವೇದವಾದ ಸಂಗೀತಕ್ಕೆ ದೀರ್ಘವಾದ ಪರಂಪರೆಯಿದ್ದು ಸಾವಿರಾರು ವರ್ಷಗಳ ಬಳಿಕವೂ ಅದು ಅಕಲಂಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತಿದೆ ಎಂದು ಪುತ್ತೂರಿನ ದ್ವಾರಕಾ ಕಾರ್ಪೋ ರೇಷನ್ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳಿದರು.
ಇಲ್ಲಿಗೆ ಸಮೀಪದ ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ವಿಜಯದಶಮಿಯಂದು ಸಂಗೀತ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಅವರು ಬರೆದ ಸಂಗೀತ ಪಾಠಮಾಲಿಕೆಯ ಪರಿಷ್ಕೃತ ನಾಲ್ಕನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು.
ಸಂಗೀತದ ಆರಂಭ ಹಂತದ ಶಾಸ್ತ್ರೀಯ ಕಲಿಕೆಗೆ ಈ ಪುಸ್ತಕ ಒಳ್ಳೆಯ ಒಂದು ಆಕರ ಗ್ರಂಥವಾಗಿದೆ. ಸಂಗೀತದ ವಿದ್ಯಾರ್ಥಿಗಳಿಗೆ ಇಂತಹ ಪುಸ್ತಕಗಳು ಅನಿವಾರ್ಯ. ಪರಿಷ್ಕೃತ ನಾಲ್ಕನೇ ಮುದ್ರಣ ಕಂಡಿರುವುದು ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಕವಿ, ಸಾಹಿತಿ ಮತ್ತು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠವು ಕಳೆದ ಇಪ್ಪತ್ತೇಳು ವರ್ಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಒಂದು ಉತ್ತಮ ಸಂಗೀತ ಸಂಸ್ಥೆಯಾಗಿ ನಡೆದು ಬರುತ್ತಿದ್ದು ಸಾವಿರಾರು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದೆ. ನಮ್ಮ ಯುವ ತಲೆಮಾರು ಸಂಸ್ಕೃತಿಮುಖಿಯಾಗಿ ಬೆಳೆಯಲು ಮತ್ತು ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಇಂತಹ ಸಂಸ್ಥೆಯನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಕುದ್ಕುಳಿ ಸುಬ್ರಹ್ಮಣ್ಯ ಭಟ್ ಅವರು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಕೃತಿಕಾರರಾದ ಬಳ್ಳಪದವು ಯೋಗೀಶ ಶರ್ಮಾ ಅವರು ಕೃತಿಯ ಕುರಿತು ಮತ್ತು ವೀಣಾವಾದಿನಿ ಸಂಗೀತ ವಿದ್ಯಾಪೀಠವು ನಡೆದು ಬಂದ ಹಾದಿಯ ಕುರಿತು ಮಾತಾಡಿದರು. ವಯಲಿನ್ ವಿದ್ವಾನ್ ಪ್ರಭಾಕರ ಕುಂಜಾರು ಶುಭಾಶಂಸನೆ ಮಾಡಿದರು. ಶ್ರೀಮತಿ ವಿದ್ಯಾಸರಸ್ವತಿ ಎಂ. ವಂದನಾರ್ಪಣೆಗೈದರು.
ವಿಜಯದಶಮಿಯ ಪುಣ್ಯದಿನವಾದ ಇಂದು ಬುಧವಾರ ಬೆಳಗ್ಗೆ ಸರಸ್ವತಿ ಪೂಜೆಯ ಬಳಿಕ ಸಂಗೀತ ಕಲಿಯುವ ನೂತನ ವಿದ್ಯಾರ್ಥಿಗಳ ಸಂಗೀತ ವಿದ್ಯಾರಂಭ ಕಾರ್ಯಕ್ರಮವು ಶಾಸ್ತ್ರೀಯವಾಗಿ ನಡೆಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀಮತಿ ಶೋಭನಾ ಯರ್ಮುಂಜ ಮತ್ತು ಕುಮಾರಿ ಆದ್ಯಾ ಪಿ. ಅವರು ಸಂಗೀತ ಕಚೇರಿ ನಡೆಸಿ ಕೊಟ್ಟರು. ಪಕ್ಕವಾದ್ಯದಲ್ಲಿ ಪ್ರಭಾಕರ ಕುಂಜಾರು ಮತ್ತು ಜಗದೀಶ್ ಕೊರೆಕ್ಕಾನ (ವಯಲಿನ್), ಆಶ್ಲೇಷ ಪಿ. ಮತ್ತು ವಿಶ್ವಾಸ್ ಪದ್ಯಾಣ (ಮೃದಂಗ), ಹಾಗೂ ಪರಾಶರ ಶರ್ಮ ಯು. ಮತ್ತು ವಿಶ್ರುತ ಬಿ. (ಘಟಂ) ಸಹಕಾರ ನೀಡಿದರು.


,


















