ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ವರಾಹಮಿಹಿರ ಮತ್ತು ಆರ್ಯಭಟರಂತಹ ಪ್ರಕಾಂಡ
ಖಗೋಳ ಶಾಸ್ತ್ರಜ್ಞರು ಬ್ರಹ್ಮಾಂಡದ ಬಗ್ಗೆ ಅದ್ಭುತವಾದ ಕೃತಿಗಳನ್ನು ರಚಿಸಿದ್ದಾರೆ. ನಾವಿರುವ ಈ ಬ್ರಹ್ಮಾಂಡವು ವಿಶಾಲ ವಿಶ್ವದಲ್ಲಿರುವ ಲಕ್ಷ ಲಕ್ಷ ಬ್ರಹ್ಮಾಂಡಗಳಲ್ಲಿ ಒಂದು. ಆಕಾಶಗಂಗೆ, ಕ್ಷೀರಪಥ, ನಿಹಾರಿಕೆ, ಸೂರ್ಯ ಮಂಡಲ, ನಕ್ಷತ್ರ ಮತ್ತು ಗ್ರಹಗಳ ಬಗೆಗಿನ ಅಪಾರವಾದ ಜ್ಞಾನದ ಭಂಡಾರ ಬಹಳ ಶತಮಾನಗಳ ಹಿಂದೆಯೇ ಭಾರತದಲ್ಲಿ ಸಾಮಾನ್ಯ ಜ್ಞಾನವಾಗಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಜ್ಞಾನೋದಯವಾಗಿದ್ದು ತೀರಾ ಇತ್ತೀಚೆಗೆ. ಆದರೆ ಮಾನವ ನಿರ್ಮಿತ ಉಪಗ್ರಹಗಳನ್ನು ಆಕಾಶದಲ್ಲಿ ನಿಲ್ಲಿಸಿ ಅದರ ಉಪಯೋಗವನ್ನು ಪಡೆದದ್ದರಲ್ಲಿ ಪಾಶ್ಚಿಮಾತ್ಯ ದೇಶಗಳು ಮುಂಚೂಣಿಯಲ್ಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಜ್ಞಾನದ ಕೊರತೆ ಇಲ್ಲದಿದ್ದರೂ ಸಂಶೋಧನೆ ಮತ್ತು ಸಂಪನ್ಮೂಲಗಳ ಕೊರತೆಯಿಂದ ನಾವು ಹಿಂದುಳಿದಿದ್ದೇವೆ. ವಿಶ್ವದಾದ್ಯಂತ ಉಪಗ್ರಹಗಳದ್ದು ಸುಮಾರು 450 ಬಿಲಿಯನ್ ಡಾಲರುಗಳ ಮಾರುಕಟ್ಟೆ, ಇದರಲ್ಲಿ ಭಾರತದ ಪಾಲು ಮಾತ್ರ ಕೇವಲ 2% ರಷ್ಟಿದೆ. 15 ಆಗಸ್ಟ್ 1969 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾದ ISRO ಭಾರತದ ಏಕಮೇವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. 1975 ರಲ್ಲಿ ಆರ್ಯಭಟ ಎನ್ನುವ ಕೃತಕ ಉಪಗ್ರಹವನ್ನು ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿ ಬಾಹ್ಯಾಕಾಶ ಸಂಶೋಧನೆಯ ಪ್ರವೇಶ ಮಾಡಿತು. ತದನಂತರ ಭಾಸ್ಕರ, ರೋಹಿಣಿ, ಇನ್ಸಾಟ್ ಸರಣಿಯ ಉಪಗ್ರಹಗಳನ್ನು ಕಳಿಹಿಸುವುದರಲ್ಲಿ ಯಶಸ್ವಿಯಾಯಿತು.
ಈ ಉಪಗ್ರಹಗಳಿಂದ ಜನಸಾಮಾನ್ಯರಿಗೆ ಸಿಗುವ ಲಾಭವೇನು?
ಮೊದಲು ಒಂದಿಷ್ಟು ತಾಂತ್ರಿಕ ಮಾಹಿತಿಯನ್ನು ಅರಿಯೋಣ.
ವಿದ್ಯುತ್ ಆಯಸ್ಕಾಂತೀಯ ಅಲೆಗಳು ಹಲವಾರು ಬ್ಯಾಂಡುಗಳಲ್ಲಿ ಪ್ರವಹಿಸುತ್ತವೆ. ಕೆಲವು ಭೂಮಿಯ ಸಮಾನಾಂತರವಾಗಿ ಪ್ರವಹಿಸಿದರೆ ಇನ್ನು ಕೆಲವು ವಾತಾವರಣದ ಕೆಲವು ಮಟ್ಟಕ್ಕೆ ತಲುಪಿ ಅಲ್ಲಿಂದ ಮರಳಿ ಭೂಮಿಗೆ ಪ್ರತಿಫಲಿಸುತ್ತವೆ. ಕೆಲವಂತೂ ವಾತಾವರಣವನ್ನು ದಾಟಿ ನಿರ್ಗಮಿಸುತ್ತವೆ, ಅಂತಹವುಗಳನ್ನು ಉಪಗ್ರಹಗಳು ಹಿಡಿದು ಭೂಮಿಗೆ ಮರುಪ್ರವಹಿಸುತ್ತವೆ.
ಈ ಬ್ಯಾಂಡುಗಳು ಹೀಗಿವೆ;L – ಬ್ಯಾಂಡ್: ಇವು GPS, ಉಪಗ್ರಹ ಆಧಾರಿತ ರೇಡಿಯೋ ಮತ್ತು ಮೊಬೈಲುಗಳಲ್ಲಿ ಅಳವಡಿಸಲ್ಪಡುತ್ತವೆ.
S- ಬ್ಯಾಂಡ್: ಇವು ಹವಾಮಾನದ ರಡಾರುಗಳಲ್ಲಿ ಬಳಸಲಾಗುತ್ತದೆ.
C-ಬ್ಯಾಂಡ್: TV ಚಾನಲ್ಲುಗಳ ಪ್ರವಹನೆ ಈ ಬ್ಯಾಂಡಿನಲ್ಲಿ ಆಗುತ್ತದೆ.
X- ಬ್ಯಾಂಡ್: ಇದು ಮಿಲಿಟರಿ ವಲಯದವರು ತಮ್ಮ ಉಪಕರಣಗಳಿಗೆ ಅಳವಡಿಸಿಕೊಳ್ಳುವ ಬ್ಯಾಂಡ್.
Ku ಮತ್ತು Ka ಬ್ಯಾಂಡುಗಳು ಪ್ರಮುಖವಾಗಿ ಸಂವಹನ ಸಂಪರ್ಕಗಳಿಗೆ, ಮೊಬೈಲುಗಳಿಗೆ ಮೀಸಲಾಗಿರುವ ಬ್ಯಾಂಡ್. ಅತಿ ಎತ್ತರದ ಉಪಗ್ರಹಗಳಿಂದ ಭೂಮಿಗೆ ಮರಳಿ ಬರುವ ಅಲೆಗಳು ವಿಸ್ತಾರವಾದ ಪ್ರದೇಶವನ್ನು ಆವರಿಸಿಕೊಳ್ಳುತ್ತವೆ, ಹಾಗಾಗಿ ಕಡಿಮೆ ವೆಚ್ಚದಲ್ಲಿ ಈ ಅಲೆಗಳು ಸವಿಸ್ತಾರವಾಗಿ ಹರಡಿಕೊಂಡು ನಿಮ್ಮ ಮೊಬೈಲುಗಳಿಗೆ, ವಾಹನಗಳ GPS ರಿಸೀವರಿಗೆ ಅಥವಾ ನಿಮ್ಮ TV ಸೆಟ್ಟಿನ ಒಳಗೆ ತೂರಿಕೊಳ್ಳುತ್ತವೆ.ಈಗಂತೂ ಎಲ್ಲಿಗೆ ಹೋಗಬೇಕಾದರೆ ಗೂಗಲ್ ಮ್ಯಾಪಿನ ಸಹಾಯದಿಂದ ಹೋಗಿಬಿಡಬಹುದು. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದರೆ ಎಷ್ಟು ನಿಮಿಷಕ್ಕೆ ಬರುತ್ತದೆ ಎನ್ನುವುದು ಸಲೀಸಾಗಿ ತಿಳಿಯುತ್ತದೆ. ನೀವು ಬುಕ್ ಮಾಡಿದ ಟ್ಯಾಕ್ಸಿ ಎಷ್ಟು ದೂರದಲ್ಲಿದೆ ಎಂಬ ಮಾಹಿತಿಯೂ ಸುಲಭವಾಗಿ ಸಿಗುತ್ತದೆ. ಈ ಎಲ್ಲಾ ಮಾಹಿತಿ ನಮಗೆ ದೊರೆಯುವುದು ಭೂಮಂಡಲದಿಂದ ಆಕಾಶದಲ್ಲಿ ಸುಮಾರು 20200 ಕಿಲೋಮೀಟರ್ ದೂರದಲ್ಲಿರುವ 24 ಉಪಗ್ರಹಗಳಿಂದ ಈ ಎಲ್ಲಾ ಮಾಹಿತಿ ದೊರೆಯುತ್ತದೆ. ಈ 24 ಉಪಗ್ರಹ ಸಮೂಹ ವನ್ನು Global Positioning System (GPS) ಎಂದು ಕರೆಯಲಾಗುತ್ತದೆ. ಈ ಉಪಗ್ರಹಗಳು ಅಮೆರಿಕ ದೇಶದ ಆಸ್ತಿ ಹಾಗಾಗಿ ಇದರಲ್ಲಿ ದೊರೆಯುವ ಮಾಹಿತಿಗಳ ಮೇಲೆ ಅವರದೇ ಹಕ್ಕು. ಅಮೆರಿಕಾದ ಸೈನ್ಯಕ್ಕೆಂದೇ ಗೂಢ ಲಿಪೀಕರಣದ GPS ಕೂಡ ಇದೆ. ಇದು ಮಿಲಿಮೀಟರುಗಳ ನಿಖರತೆಯನ್ನು ಹೊಂದಿರುತ್ತದೆ. ಇದು ನಮಗೆ ಅಂದರೆ ಭಾರತಕ್ಕೆ ಲಭ್ಯವಿಲ್ಲ. 1999 ರಲ್ಲಿ ಪಾಕಿಸ್ತಾನಿಗಳು ಕಾರ್ಗಿಲ್ ಪ್ರದೇಶದಲ್ಲಿ ನುಸುಳುವ ಪ್ರಯತ್ನ ಮಾಡುತ್ತಿದ್ದಾಗ ಭಾರತ ಇದರ ಬಗ್ಗೆ GPS ಮಾಹಿತಿ ಕೊಡಿ ಎಂದು ಅಮೆರಿಕಕ್ಕೆ ಕೋರಿಕೆ ಸಲ್ಲಿಸಿದಾಗ ಅಮೆರಿಕ ಮಾಹಿತಿಯನ್ನು ಕೊಡಲು ನಿರಾಕರಿಸಿತು. ಇದರಿಂದ ಎಚ್ಚೆತ್ತುಕೊಂಡ ಭಾರತ 2013 ರಲ್ಲಿ ರಲ್ಲಿ ನಾವಿಕ್ ಎನ್ನುವ ಎಂಟು ಉಪಗ್ರಹಗಳ ಸಮೂಹವನ್ನು ಪ್ರಾರಂಭಿಸುವ ಯೋಜನೆಗೆ ಮುಂದಾಯಿತು. ಬೆಂಗಳೂರಿನ ಸಮೀಪದ ಬ್ಯಾಲಾಳು ಎನ್ನುವ ಪ್ರದೇಶದಲ್ಲಿ ಇದರ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿತು. ಇದರ ಲಾಭ ಭಾರತ ಮತ್ತು ಅದರ ಸುತ್ತಲಿನ 1500 ಕಿಮೀ ವರೆಗೂ ದೊರೆಯಲಿದೆ. ಈ ವ್ಯವಸ್ಥೆಯ ಉಪಗ್ರಹಗಳು L ಮತ್ತು S ಬ್ಯಾಂಡುಗಳಲ್ಲಿ ಪ್ರವಹಿಸುತ್ತವೆ ಹಾಗಾಗಿ ಇದು ಅಮೆರಿಕದ GPS ಗಿಂತಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ. ಆಗಸ್ಟ್ 2021 ರಲ್ಲಿ ಬಿಡುಗಡೆಯಾದ ಕೇಂದ್ರದ ಕರಡು ನೀತಿಯ ಪ್ರಕಾರ ISRO ಮತ್ತು ಉಪಗ್ರಹ ವಿಭಾಗ ನಾವಿಕ್ ವ್ಯವಸ್ಥೆಯ ಕಾರ್ಯಪರಿಧಿಯನ್ನು ವಿಸ್ತರಿಸಿ ವಿಶ್ವವ್ಯಾಪಿ ಮಾಡುವ ಚಿಂತನೆ ನಡೆಸಿದೆ.
ಭಾರತದ ಮೊಟ್ಟಮೊದಲ ಉಪಗ್ರಹ ಆರ್ಯಭಟವನ್ನು 1975 ರಲ್ಲಿ ಹಾರಿಸಲಾಯಿತು ಅಲ್ಲಿಂದ ಈ 46 ವರ್ಷಗಳಲ್ಲಿ ಸುಮಾರು 120 ಉಪಗ್ರಹಗಳನ್ನು ಭೂಕಕ್ಷೆಯಲ್ಲಿ ಸ್ಥಾಪಿಸಲಾಗಿದೆ. ಈಗಾಗಲೇ ಆಕಾಶದಲ್ಲಿ ಉಪಗ್ರಹಗಳ ದಟ್ಟಣೆ ಹೆಚ್ಚಾಗಿದ್ದು, ಇವುಗಳನ್ನು ಸರಿಯಾದ ಕಕ್ಷೆಗೆ ಕೂರಿಸುವುದು ಬಹಳ ಪ್ರಮುಖವಾದ ಅಂಶ. ಇದಕ್ಕೆ ISRO ದವರು ಎರಡು ತರಹದ ಉಡಾಣದ ವಾಹನಗಳನ್ನು ಬಳಸುತ್ತಾರೆ. ಮೊದಲು ಪ್ರಾರಂಭವಾಗಿದ್ದು ಧ್ರುವ ಉಪಗ್ರಹ ಉಡಾವಣ ವಾಹನ (PSLV ) ಮತ್ತು ನಂತರ ಅಭಿವೃದ್ಧಿ ಪಡಿಸಿದ್ದು ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV). ಎಂಜಿನ್ನಿನ ಅಧಿಕ ಸಾಮರ್ಥ್ಯ ಮತ್ತು ವಿಶೇಷ ಇಂಧನವನ್ನು ಬಳಸುವುದರಿಂದ GSLV ಅಧಿಕ ಭಾರದ ಮತ್ತು ದೂರದ ಕಕ್ಷೆಯಲ್ಲಿ ಇರಿಸಬೇಕಾದ ಉಪಗ್ರಹಗಳ ಉಡಾವಣೆಗೆ ಉಪಯೋಗಿಸಲಾಗುತ್ತದೆ. ಭಾರತದಲ್ಲಿ ಮೂರು ಸ್ಥಳಗಳಲ್ಲಿ ಈ ಉಡಾಣದ ವಾಹನಗಳನ್ನು ಹಾರಿಸುವ ವ್ಯವಸ್ಥೆ ಇದೆ. ತಿರುವನಂತಪುರದ ಬಳಿಯಿರುವ ಥುಂಬಾ, ಆಂಧ್ರದ ಶ್ರೀಹರಿಕೋಟಾ ಮತ್ತು ಒಡಿಸ್ಸಾದ ಬಾಲಾಸೂರು ಈ ಮೂರು ಏರು ನೆಲೆಗಳಿಂದ ಹಾರಿಸಲಾಗುತ್ತದೆ. ನಮ್ಮದೇಶದಲ್ಲಿ ತಯಾರಾದ ಉಪಗ್ರಹಗಳ ಜೊತೆಗೆ ಕೆಲವು ಸಲ ಕೆಲ ವಿದೇಶೀಯರ ಉಪಗ್ರಹಗಳನ್ನೂ ಹಾರಿಸಿಕೊಡಲಾಗುತ್ತದೆ ಮತ್ತು ನಮ್ಮ ದೇಶದ ಉಪಗ್ರಹಗಳನ್ನು ಕೆಲವು ಹೊರದೇಶಗಳ ಏರುನೆಲೆಯಿಂದಲೂ ಹಾರಿಸಲಾಗುತ್ತದೆ. ಈ ಉಡಾಣದ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಲೆಂದೇ ಒಂದು ಏಕಗವಾಕ್ಷಿಯ ವ್ಯವಸ್ಥೆಯೊಂದನ್ನು ನಿರ್ಮಿಸಲಾಗಿದೆ ಅದೇ Indian National Space Promotion and Authorisation Centre (IN-SPACe). ಇದು ಉಪಗ್ರಹ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆ.
2019 ರ ಡಿಸೆಂಬರ್ ತಿಂಗಳಿನಲ್ಲಿ ISRO ಸೇರಿದಂತೆ ಇತರೆ IIT ಗಳು, ಪ್ರಾರಂಭಿಕ ಉದ್ಯೋಗಿಗಳು, ಸೈನ್ಯದ ವಿವಿಧ ಅಂಗಗಳು ಮತ್ತು ದೇಶ ವಿದೇಶಗಳ ಖಾಸಗಿ ಬಾಹ್ಯಾಕಾಶ ಉದ್ಯೋಗಿಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಒಂದು ನಿರ್ದೇಶನವನ್ನು ನೀಡಿದರು, ಅದೇನೆಂದರೆ ಸುಮಾರು 700 ಕೋಟಿ ರೂಪಾಯಿಗಳಷ್ಟು ಮೌಲ್ಯದ ಈ ಬಾಹ್ಯಾಕಾಶ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಏಕೆ ISRO ಸಂಸ್ಥೆಯ ಆಶ್ರಯದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಪ್ರಯತ್ನ ಪಡಬಾರದು…ಎಂದು. ಈ ನಿರ್ದೇಶನವನ್ನು ಕಾರ್ಯಗತಗೊಳಿಸಲು ಹಲವಾರು ಹಂತದ ಚರ್ಚೆಗಳು ನಡೆಯಿತು. ಈ ಕ್ಷೇತ್ರದಲ್ಲಿ ಶತ ಪ್ರತಿಶತ ನೇರ ವಿದೇಶೀ ಹೂಡಿಕೆಯ ಬಗ್ಗೆಯೂ ಪರಿಗಣಿಸಲಾಗುವುದು ಎನ್ನುವ ಆಶ್ವಾಸನೆಯನ್ನು ಕೊಡಲಾಗಿದೆ. ಇದರ ಪ್ರತಿಫಲವಾಗಿ ಉದಯಿಸಿದ ಸಂಸ್ಥೆಯನ್ನು 11 ಅಕ್ಟೋಬರ್ 2021 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಆತ್ಮನಿರ್ಭರ ಭಾರತದ ದಾರ್ಶನಿಕತೆಯ ಅನುಸಾರವಾಗಿ ರಕ್ಷಣಾ ಇಲಾಖೆ ಸೇರಿದಂತೆ ಇತರೆ ಬಾಹ್ಯಾಕಾಶ ಮತ್ತು ಉಪಗ್ರಹಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಉತ್ಪಾದನೆ, ಪ್ರಯೋಗ ನಡೆಸುತ್ತಿರುವ ಹಲವಾರು ವಿವಿಧ ಕೇಂದ್ರಗಳನ್ನು ಒಟ್ಟಾಗಿಸುವ ಈ ಸಂಸ್ಥೆಯ ಹೆಸರು Indian Space Authority (ISpA). ನೆಲ್ಕೋ(ಟಾಟಾ), L&T, BEL, ಭಾರತಿ ಏರ್ಟೆಲ್, ಮ್ಯಾಪ್ ಮೈ ಇಂಡಿಯಾ, ವಾಲ್ಚಂದ್ ನಗರ ಇಂಡಸ್ಟ್ರೀಸ್ ಮುಂತಾದ ಹಲವಾರು ಖಾಸಗಿ ದೇಶೀಯ ಮತ್ತು ವಿದೇಶೀಯ ಕಂಪನಿಗಳು ಸುಗಮವಾಗಿ, ಸಮನ್ವಯದಿಂದ ISRO ದೊಂದಿಗೆ ಸಹಕಾರ ನಡೆಸಿಕೊಂಡು ದೇಶದ ಬಾಹ್ಯಾಕಾಶ, ಉಪಗ್ರಹಗಳಾಧಾರಿತ ಉಪಯೋಗಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದೊಂದು ಹಲವಾರು ಹಂತಗಳಲ್ಲಿ ನಡೆಯುವ ವಿವಿಧ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸುವ ವೇದಿಕೆ. ISRO ದಲ್ಲಿರುವ ಸೌಲಭ್ಯಗಳನ್ನು ಮುಕ್ತವಾಗಿ ವಿನಿಯೋಗಿಸಿಕೊಳ್ಳುವ ವಿಧಾನದ ಬಗ್ಗೆ ನೀತಿ ಸಂಹಿತೆಯನ್ನು ರಚಿಸಲಾಗಿದೆ. ಭೂಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಎ. ಕೆ. ಭಟ್ ರವರನ್ನು ಈ ಸಂಸ್ಥೆಯ ಪ್ರಥಮ ಡೈರೆಕ್ಟರ್ ಜನರಲ್ ಆಗಿ ನಿಯೋಜಿಸಲಾಗಿದೆ.
ಸೈನ್ಯದಲ್ಲಿ ಉಪಗ್ರಹಗಳ ಉಪಯೋಗ
ಸೈನ್ಯದಲ್ಲಿ ಸುಮಾರು 74400 ಉಪಗ್ರಹಗಳ ಆಧಾರಿತ ಚಟುವಟಿಕೆಗಳು ನಡೆಯುತ್ತವೆ ಎಂದರೆ ಆಶ್ಚರ್ಯವಾಗಬಹುದು. ಮೊದಮೊದಲು ಕೇವಲ ಛಾಯಾಚಿತ್ರ ವಿಚಕ್ಷಣಕ್ಕೆ ಮಾತ್ರ ಉಪಗ್ರಹಗಳನ್ನು ಬಳಸಲಾಗುತ್ತಿತ್ತು ತದನಂತರ ಬೇಹುಗಾರಿಕೆ, ಮಾಹಿತಿ ಸಂಗ್ರಹಣೆ, ಸಂಪರ್ಕ ವ್ಯವಸ್ಥೆ, ಪಥನಿರ್ದೇಶನ ಹಾಗು ಇತರ ಚಟುವಟಿಕೆಗಳಲ್ಲಿ ವ್ಯಾಪಕವಾಗಿ ಉಪಗ್ರಹಗಳ ಬಳಕೆಯಾಗಲು ಪ್ರಾರಂಭವಾಯಿತು. ಈಗಂತೂ ಎತ್ತರದ ಪರ್ವತ ಶಿಖರಗಳಲ್ಲಿ ಕುಳಿತು ಗಡಿ ಕಾಯುತ್ತಿರುವ ಸೈನಿಕನ ಆರೋಗ್ಯವನ್ನು ಉಪಗ್ರಹಗಳ ಮೂಲಕ ನಿಗಾವಹಿಸಲಾಗುತ್ತದೆ. ಬಾಲಾಕೋಟಿನ ವಾಯುಪ್ರಹಾರವನ್ನು ತಿರುವನಂತಪುರದಲ್ಲಿ ಕುಳಿತ ಕಮಾಂಡರ್ ನಿರ್ದೇಶಿಸಲು ಸಾಧ್ಯ! ಸುಮಾರು ಹದಿನೈದು ಉಪಗ್ರಹಗಳನ್ನು ಸೈನ್ಯದ ಉಪಯೋಗಕ್ಕೆಂದೇ ಮೀಸಲಿಡಲಾಗಿದೆ. GSAT-7A ಉಪಗ್ರಹವನ್ನು ವಿಶೇಷವಾಗಿ ವಾಯುಸೇನೆಯ ಚಟುವಟಿಕೆಗಳಿಗಿಟ್ಟಿದ್ದರೆ, ನೌಕಾದಳದ ಸಂಪರ್ಕ ಸಾಧನೆಗೆಂದೇ 2022 ರಲ್ಲಿ GSAT-7R ಬರಲಿದೆ. ಈ ಉಪಗ್ರಹದಿಂದ ಸುಮಾರು 2000 ನಾಟಿಕಲ್ ಮೈಲಿ ಅಂದರೆ ಸುಮಾರು 3600 ಕಿಮೀಗಳ ಪರಿಧಿಯಲ್ಲಿ ಸರಾಗವಾಗಿ ಸಂಪರ್ಕ ಸಾಧನೆ ಸಾಧ್ಯವಾಗುತ್ತದೆ.
ಭವಿಷ್ಯದ ಯುದ್ಧಗಳು ಅಂತರಿಕ್ಷಕ್ಕೂ ವ್ಯಾಪಿಸಬಹುದು ಎನ್ನುವ ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತವು ಇದಕ್ಕೂ ಸಿದ್ಧತೆ ನಡೆಸುತ್ತಿದೆ. ಇದಕ್ಕೆಂದೇ ಸೈನ್ಯದ ಮೂರೂ ಅಂಗಗಳನ್ನು ಸೇರಿಸಿ Defence Space Agency (DSA) ಎನ್ನುವ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮಾರ್ಚ 2019 ರಲ್ಲಿ “ಮಿಷನ್ ಶಕ್ತಿ” ಎನ್ನುವ ಹೆಸರಿನ ಯುದ್ಧಾಭ್ಯಾಸದಲ್ಲಿ ಅನಿವಾರ್ಯತೆ ಬಂದರೆ ಶತ್ರುಗಳ ಉಪಗ್ರಹಗಳನ್ನು ಹೊಡೆದುರುಳಿಸುವ ಶಕ್ತಿ ಪ್ರದರ್ಶನವನ್ನೂ ಮಾಡಲಾಯಿತು. ಇದನ್ನು Anti-Satellite Weapons (ASAT) ಎಂದು ಕರೆಯಲಾಗುತ್ತದೆ.ಅಂತರಿಕ್ಷದಲ್ಲಿ ಭಾರತೀಯ ಉಪಗ್ರಹಗಳ ಸಂಖ್ಯೆಯನ್ನು ಹೆಚ್ಚಿಸಿ ಇದರಿಂದ ಅಂತ್ಯೋದಯದಂತಹ ಜನೋಪಯೋಗಿ ಯೋಜನೆಗಳಿಗೆ ಒತ್ತು ನೀಡುವುದೇ ಪ್ರಧಾನಿ ಮೋದಿಯವರ ಆತ್ಮನಿರ್ಭರತೆಯ ಕನಸಾಗಿದೆ ಮತ್ತು ಅದನ್ನು ನನಸಾಗಿಸುವ ಸಂಪೂರ್ಣ ಪ್ರಯತ್ನಗಳೂ ಸತತವಾಗಿ ನಡೆಯುತ್ತಿವೆ.
✍️.…ವಿಂಗ್ ಕಮಾಂಡರ್ ಸುದರ್ಶನ
Udaya Prabha > State News > ಭೂಮಂಡಲದಿಂದ ಬ್ರಹ್ಮಾಂಡಕ್ಕೆ…
ಭೂಮಂಡಲದಿಂದ ಬ್ರಹ್ಮಾಂಡಕ್ಕೆ…
Team Udayaprabha24/10/2026
posted on


,


















