| Latest Version 9.0.7 |

State News

ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಅರ್ನಬ್ ಚಂಡಮಾರುತ; ಕಟ್ಟೆಚ್ಚರ

ಅಮರಾವತಿ: ಆಂಧ್ರಪ್ರದೇಶ ಕರಾವಳಿ ಪ್ರದೇಶಕ್ಕೆ

ಬುಧವಾರ ಬೆಳಗಿನ ಜಾವ ಅರ್ನಬ್ ಚಂಡಮಾರುತ ಅಪ್ಪಳಿಸಿದೆ. ಆಂಧ್ರ ಕರಾವಳಿಯುದ್ದಕ್ಕೂ ಅಪ್ಪಳಿಸುತ್ತಿರುವ ಈ ಪ್ರಕ್ರಿಯೆ ಮಂದಿನ ಎರಡು ಮೂರು ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಆಂಧ್ರಪ್ರದೇಶದ ದಕ್ಷಿಣ ಭಾಗದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಜನರನ್ನು ಪೊಲೀಸರು ರಕ್ಷಿಸಿದ್ದಾರೆ.

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಬೆಳಿಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಅತ್ಯಂತ ತೀವ್ರ ಸ್ವರೂಪದ ಈ ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಆಂಧ್ರಪ್ರದೇಶ ಕರಾವಳಿಯ ಮೂಲಕ ಹಾದು ಹೋಗುತ್ತಿದೆ. ಇದು ನರಸಾಪುರದಿಂದ 30 ಕಿ.ಮೀ ಪೂರ್ವ, ಯಾಣಂನಿಂದ 45 ಕಿ.ಮೀ ನೈಋತ್ಯ, ಕಾಕಿನಾಡದಿಂದ 70 ಕಿ.ಮೀ ನೈಋತ್ಯ ಹಾಗೂ ಮಚಲಿಪಟ್ಟಣಂನಿಂದ 90 ಕಿ.ಮೀ ಈಶಾನ್ಯಕ್ಕೆ ಬೀಸುತ್ತಿದೆ.

ಮುಂದಿನ ಮೂರು ಗಂಟೆಗಳಲ್ಲಿ ಈ ಚಂಡಮಾರುತವು ವಾಯವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ಗರಿಷ್ಠ 135 ಕಿ.ಮೀ.ನಿಂದ 150ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಅತಿ ತೀವ್ರ ಸ್ವರೂಪದ ಚಂಡಮಾರುತವಾಗಿ ಕರಾವಳಿಯನ್ನು ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಪ್ರಭಾವದಿಂದ ಅನಕಪಲ್ಲಿ, ವಿಶಾಖಪಟ್ಟಣ, ಕಾಕಿನಾಡ ಮತ್ತು ಕೋನಸೀಮಾ ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗುತ್ತಿದೆ. ವಿಶಾಖಪಟ್ಟಣ, ಕಾಕಿನಾಡ, ಕೋನಸೀಮಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ಬೀಸುತ್ತಿರುವುದಾಗಿ ಆಯಾ ಜಿಲ್ಲಾಧಿಕಾರಿಗಳು ವರದಿ ಮಾಡಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಹಲವೆಡೆ ಮರಗಳು ಧರೆಗುರುಳಿವೆ.

ಚಂಡಮಾರುತವನ್ನು ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆರೆಯ ಒಡಿಶಾ ಹಾಗೂ ತಮಿಳುನಾಡಿನಲ್ಲೂ ಮಳೆಯಾಗುತ್ತಿದೆ.

Team Udayaprabha
";