ನವದೆಹಲಿ: ನೇಪಾಳದ ಸೋಲುಖುಂಬು ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಎರಡು ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಓರ್ವ ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದಾರೆ.
ನೇಪಾಳದ ಸೋಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲ್ಹಾಮು ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 4ರಲ್ಲಿರುವ ಫೆರಿಚೆ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಏರ್ ಡೈನಾಸ್ಟಿ (Air Dynasty) ಮತ್ತು ಫಿಶ್ಟೇಲ್ ಏರ್ (Fishtail Air) ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್ಗಳು ಬೆಳಿಗ್ಗೆ ಸುಮಾರು 8:11ರ ವೇಳೆಗೆ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಪರಸ್ಪರ ಡಿಕ್ಕಿಯಾಗಿವೆ ಎಂದು ಜಿಲ್ಲಾ ಪೊಲೀಸ್ ಕಚೇರಿ ತಿಳಿಸಿದೆ.
ಜಿಲ್ಲಾ ಪೊಲೀಸ್ ಕಚೇರಿಯ ಮಾಹಿತಿ ಅಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಮೌಸಮ್ ತಮಾಂಗ್ ಅವರು ಘಟನೆಯಲ್ಲಿ ಮೃತಪಟ್ಟ ವಿದೇಶಿ ಪ್ರಜೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದು, ಅವರನ್ನು ಪ್ರಭು ಏರ್ (Prabhu Air) ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಲುಕ್ಲಾಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡೂ ಹೆಲಿಕಾಪ್ಟರ್ಗಳಲ್ಲಿದ್ದ ಇತರ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸ್ಥಿತಿಗತಿಯ ಬಗ್ಗೆಯೂ ತಕ್ಷಣಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಹಿಮಾಲಯದ ಪರ್ವತ ಪ್ರದೇಶದಲ್ಲಿರುವ ಫೆರಿಚೆಯಲ್ಲಿ ಸಂಭವಿಸಿದ ಈ ಅಪಘಾತಕ್ಕೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.


,


















