| Latest Version 9.0.7 |

State News

ನಂದಿನಿ ಮೊಸರಿನ ಬೆಲೆ ಇಳಿಕೆಗೆ ಸಿಎಂ ಶಿವಕುಮಾರ ಸೂಚನೆ

ಬೆಂಗಳೂರು : ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ನಂದಿನ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

ಹಾಲಿನ ಬೆಲೆ ಏರಿಕೆಗೆ (Milk Price Hike) ಹೋಲಿಸಿದರೆ ಮೊಸರಿನ ದರದಲ್ಲಿ ಹೆಚ್ಚಿನ ಪ್ರಮಾಣದ ಹೆಚ್ಚಳ ಮಾಡಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಮೊಸರಿನ ಬೆಲೆ ಏರಿಕೆಯ ಹಣ ರೈತರಿಗೆ ತಲುಪುತ್ತದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿತ್ತು.

ಈ ವಿಚಾರವಾಗಿ ಸೋಮವಾರ (ನವೆಂಬರ್ 2) ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಮೊಸರಿನ ಬೆಲೆ ಏರಿಕೆ ವಿಚಾರದಲ್ಲಿ ಗ್ರಾಹಕರಿಗೆ ಸ್ವಲ್ಪಮಟ್ಟಿನ ರಿಯಾಯಿತಿ ನೀಡುವ ಉದ್ದೇಶದಿಂದ ಹೆಚ್ಚಳವನ್ನು ಕಡಿಮೆ ಮಾಡಲು ಸೂಚಿಸಿರುವುದಾಗಿ ಹೇಳಿದರು. ಕೆಎಂಎಫ್ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ” ಎಂದುಹೇಳಿದರು.

ಮೊಸರಿನ ದರವನ್ನು ಎರಡು ರೂಪಾಯಿ ಇಳಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು. ಹಾಲಿನ ಬೆಲೆ ಹೆಚ್ಚಳದಿಂದ ಬಂದಿರುವ ಎಂಟು ರೂಪಾಯಿಗಳ ಪೈಕಿ ಏಳು ರೂಪಾಯಿಗಳನ್ನು ರೈತರಿಗೆ ನೀಡಲಾಗುತ್ತಿದೆ. ಉಳಿದ ಒಂದು ರೂಪಾಯಿ ಕೆಎಂಎಫ್‌ಗೆ (KMF) ಹೋಗಲಿದೆ ಎಂದು ತಿಳಿಸಿದರು.

ನೀರಿನ ಬಾಟಲಿಗಳ ಬೆಲೆ ಹೆಚ್ಚಳವಾದಾಗ ಇದೇ ರೀತಿಯ ಪ್ರಶ್ನೆಗಳು ಏಕೆ ಕೇಳಿಬರಲಿಲ್ಲ ಎಂದು ಪ್ರಶ್ನಿಸಿದರು.

Team Udayaprabha
";