ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿಗೆ ಭಾನುವಾರ ಸಂಜೆ ಬಂದ ಇಂಡಿಗೋ ವಿಮಾನ ಸಿಬ್ಬಂದಿ ಸುಮಾರು 22 ಹೆಚ್ಚು ಪ್ರಯಾಣಿಕರ ಲಗೇಜ್ ನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದಿದ್ದಾರೆ. ಇದರಿಂದಾಗಿ ಬೆಳಗಾವಿ ಸೇರಿದಂತೆ ವಿವಿಧ ಪ್ರದೇಶಗಳ ಪ್ರಯಾಣಿಕರು ತೀವ್ರ ಪರದಾಟ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ವಿಮಾನದಲ್ಲಿ ಆಗಮಿಸಿದ್ದು, ಅವರ ಬ್ಯಾಗ್ ಕೂಡ ಮಿಸ್ಸಿಂಗ್ ಆಗಿದೆ. ಬೆಳಗಾವಿಗೆ ಬಂದು ಇಳಿಯುವವರೆಗೆ ಬ್ಯಾಗ್ ಬಾರದಿರುವ ಕುರಿತು ಯಾರಿಗೂ ಮಾಹಿತಿ ನೀಡಿರಲಿಲ್ಲ.
ಭಾನುವಾರ ಸಂಜೆ 5.55ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನ ಹೊರಟಿದೆ. ವಿಮಾನದಲ್ಲಿ ಮಲೇಷಿಯನ್ ವಿದ್ಯಾರ್ಥಿಗಳು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ವಿಮಾನ ರಾತ್ರಿ 7.30 ಗಂಟೆಗೆ ಬೆಳಗಾವಿಗೆ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಬಿಗ್ ಶಾಕ್ ಕಾದಿತ್ತು. ಸುಮಾರು 22 ಹೆಚ್ಚು ಪ್ರಯಾಣಿಕರ ಬ್ಯಾಗ್ ಗಳು ಬಂದಿರಲಿಲ್ಲ.
ಈ ಕುರಿತು ಪ್ರಯಾಣಿಕರು ವಿಚಾರಿಸಿದರೆ, ಮಲೇಷಿಯನ್ ವಿದ್ಯಾರ್ಥಿಗಳ ಬ್ಯಾಗ್ ಗಳು ಬಹಳ ದೊಡ್ಡದಿದ್ದವು. ಹಾಗಾಗಿ ಬೇರೆ ಪ್ರಯಾಣಿಕರ ಬ್ಯಾಗ್ ಗಳನ್ನು ತರಲು ಸಾಧ್ಯವಾಗಿಲ್ಲ. ನಿಮ್ಮ ಬ್ಯಾಗ್ ಗಳನ್ನು ನಾಳೆ ತರಿಸಿಕೊಡುತ್ತೇವೆ ಎನ್ನುತ್ತಿದ್ದಾರೆ ಸಿಬ್ಬಂದಿ. ಇದರಿಂದ ಕಂಗೆಟ್ಟ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.
ಮಲೇಷಿಯನ್ ವಿದ್ಯಾರ್ಥಿಗಳ ಬ್ಯಾಗ್ ದೊಡ್ಡದಿದ್ದರೆ ಅವರ ಬ್ಯಾಗ್ ಬಿಡಬಹುದಿತ್ತು. ಅಥವಾ ನಮಗೆ ಮೊದಲೇ ಮಾಹಿತಿ ನೀಡಬೇಕಿತ್ತು. ನಮ್ಮಲ್ಲಿ ಹಲವರು ಸೀನಿಯರ್ ಸಿಟಿಜನ್ಸ್ ಇದ್ದಾರೆ, ಬೇರೆ ಊರಿನ ಪ್ರಯಾಣಿಕರಿದ್ದಾರೆ. ಅನೇಕರ ಮೇಡಿಸಿನ್ ಗಳು ಸೇರಿದಂತೆ ಅಗತ್ಯ ವಸ್ತುಗಳು ಬ್ಯಾಗ್ ನಲ್ಲಿವೆ. ಅಂತವರು ಈಗ ಏನು ಮಾಡಬೇಕು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ತೂಕ ಸೇರಿದಂತೆ ಎಲ್ಲ ಪರಿಶೀಲನೆಯ ನಂತರವೇ ಲಗೇಜ್ ಪಡೆದು, ವಿಮಾನಕ್ಕೆ ಹಾಕಲಾಗುತ್ತದೆ. ಆದರೂ ಈ ರೀತಿಯ ಅಚಾತುರ್ಯ ಹೇಗಾಯಿತು? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರಾತ್ರಿ ಪ್ರಯಾಣಿಕರ ಪ್ರತಿಭಟನೆ ಮುಂದುವರಿದಿತ್ತು. ವಿಮಾನ ಸಿಬ್ಬಂದಿ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಬೇರೆ ಊರಿಗೆ ಹೋಗಬೇಕಿರುವ ಮತ್ತು ಬೇರೆ ಊರಿನಿಂದ ಬಂದಿರುವ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.