ಅಯೋಧ್ಯೆ: ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬ ಈಗಾಗಲೇ ಅಯೋಧ್ಯೆ ತಲುಪಿದೆ.

ರಾಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೊದಲ ರಾವನವಮಿ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಅರುಣ್‌ ಕುಟುಂಬ ಆಗಮಿಸಿದೆ.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರುಣ್‌ ಅವರು, ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಕೆಲಸವನ್ನು ನೋಡಿ ಕುಟುಂಬ ಸಂತಸಗೊಂಡಿದೆ. ರಾಮನವಮಿ ಆಚರಣೆಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿಲ್ಪಿ, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿದ್ದೇನೆ. ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು.

ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದರು.