| Latest Version 9.0.7 |

State News

ಅಡಿಕೆ, ಅಕೇಶಿಯಾ, ಬೀದಿ ನಾಯಿಗಳ ಹಾವಳಿ ಬಗ್ಗೆ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದ್ದು ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಪುತ್ತೂರು‌ ಶಾಸಕ ಅಶೋಕ್ ರೈ ಅವರು ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಿದೆ. ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ವ್ಯಕ್ತಿಯೋರ್ವ ನಾಯಿ ಕಚ್ಚಿ ಸಾವನ್ನಪ್ಪಿದ್ದಾರೆ ಇದು ಎಲ್ಲೂ ಮರುಕಳಿಸಬಾರದು. ಶಾಲೆ ಬಿಟ್ಟು ತೆರಳುವ ಸಂದರ್ಭದಲ್ಲಿ ನಾಯಿಗಳ ಗುಂಪು ಓಡಿಸಿದ್ದಲ್ಲಿ ಅಪಘಾತಗಳು ಉಂಟಾಗುವ ಸಾಧ್ಯತೆ ಇದೆ. ಪುತ್ತೂರಿನಲ್ಲಿ ಎಲ್ಲೆಂದರಲ್ಲಿ ನಾಯಿಗೆ ಆಹಾರ ಹಾಕುತ್ತಿರುವ ಕೆಲವು ವ್ಯಕ್ತಿಗಳಿಂದಾಗಿ ನಾಯಿಗಳು ಒಂದೆಡೆ ಗುಂಪು ಸೇರುತ್ತಿದೆ. ಸುಪ್ರಿಂ ಆದೇಶ ಪ್ರಕಾರ ನಾಯಿಗಳನ್ನು ಶೆಲ್ ನಲ್ಲಿ ಹಾಕಿ ಅಲ್ಲಿ ಆಹಾರ ಹಾಕುವ ವ್ಯವಸ್ಥೆಯನ್ನು ಕೂಡಲೇ ಜಾರಿ ಮಾಡಬೇಕು.
ಹುಚ್ಚು ನಾಯಿ ಕಡಿತಕ್ಕೊಳಗಾದಲ್ಲಿ ಅದರಿಂದ ಆಗುವ ಸಾವು ನೋವುಗಳನ್ನು ಸಹಿಸಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಬೇಕು ಎಂದು ಸಭೆಗೆ ತಿಳಿಸಿದರು.

ಅಕೇಶಿಯಾ ಮರಗಳ ತೆರವು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ
ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ಗೆ ಗ್ರೀನ್ ಸಿಗ್ನಲ್
ಮಂಗಳೂರು: ಸರಕಾರಿ ಜಾಗದಲ್ಲಿ,ಜನವಸತಿ ಪ್ರದೇಶದಲ್ಲಿರುವ ಅಕೇಶಿಯಾ ಮರಗಳನ್ನು ತೆರವು ಮಾಡಬೇಕು ,ಈ ಮರಗಳಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ ಈ ಕಾರಣಕ್ಕೆ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಆದೇಶ ನೀಡಬೇಕು ಎಂದು‌ಶಾಸಕ ಅಶೋಕ್ ರೈ ಅವರು ಜಿಪಂ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಆಗ್ರಹಿಸಿದರು.
ಆರ್ಯಾಪು ಗ್ರಾಮದಲ್ಲಿ ಸುಮಾರು 15 ಎಕ್ರೆ ಜಾಗ ಸರಕಾರಿ ಭೂಮಿಯಲ್ಲಿ ಅಕೇಶಿಯಾ ಗಿಡಗಳಿವೆ. ಈ ವ್ಯಾಪ್ತಿಯ ಸುತ್ತಲೂ ಮನೆಗಳಿವೆ ,ಅಕೇಶಿಯಾ ಮರ ಹೂ ಬಿಡುವ ಸಮಯದಲ್ಲಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಧ್ಯಕ್ಷರ ಗಮನ ಸೆಳೆದರು.
ಅಕೇಶಿಯಾ ಮರಗಳನ್ನು ತೆರವು‌ಮಾಡುವ ವಿಚಾರದಲ್ಲಿ ಸುಪ್ರಿಂ ಆದೇಶವೂ ಇದ್ದು ಅದರ ಪ್ರಕಾರ ಮರಗಳನ್ನು ತೆರವು ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಗೆ ತಿಳಿಸಿದರು.
ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ಸರಕಾರದಿಂದ 9 ಕೋಟಿ ಅನುದಾನ ಮಂಜೂರಾಗಿದೆ. ಮುಂಡೂರಿನಲ್ಲಿ ನಿಗಧಿ ಮಾಡಿದ ಜಾಗ ಡೀಮ್ಡ್ ಫಾರೆಸ್ಟ್ ಎಂದು ಸಾಮಾಜಿಕ ಅರಣ್ಯ ಇಲಾಖೆ ವರದಿ ಕಳಿಸಿದೆ. ಇಲಾಖೆಯಿಂದ ಎನ್ ಒ ಸಿ ಸಿಕ್ಕಿಲ್ಲ ಯಾಕೆ ಹೀಗೆ ಮಾಡ್ತಾರೆ? ಪುತ್ತೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ನಾನು,ನೀವು‌ಎಷ್ಟು ಪ್ರಯತ್ನಪಟ್ಟಿದ್ದೀವಿ. ಸಾಮಾಜಿಕ ಅರಣ್ಯ ಇಲಾಖೆಯ ವರು ಆ ಜಾಗದಲ್ಲಿ ನಾಲ್ಕು‌ಮರ ಇದೆ ಎಂದು ದೊಡ್ಡ ಯೋಜನೆಯನ್ನು ಬಿಟ್ಟುಬಿಡಬೇಕಾ ಎಂದು‌ ಶಾಸಕರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ರವರು ಮುಂಡೂರಿನಲ್ಲಿ ನಿಗಧಿತ ಜಾಗದಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ಎನ್ ಒ ಸಿ ನೀಡಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.

ಹವಾಮಾನ ಆಧಾರಿತ ಬೆಳೆ ವಿಮೆ
ನವೆಂಬರ್ ಅಂತ್ಯದೊಳಗೆ ಪಾವತಿಯಾಗಲೇಬೇಕು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ
ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮೆ ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ ಜಮೆಯಾಗಿತ್ತು, ಆದರೆ ಈ ವರ್ಷ ತಡವಾಗಿದೆ. ಮೊನ್ನೆ ವಿಮಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಈ ತಿಂಗಳ ಅಂತ್ಯದಲ್ಲಿ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ ಇನ್ನು ಯಾವುದೇ ಕಾರಣಕ್ಕೂ ವಿಳಂಬವಾಗವಾರದು ಎಂದು ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹಿಸಿದರು. ಸಭೆಯಲ್ಲಿದ್ದ ಅಧಿಕಾರಿ‌ಈ ಬಗ್ಗೆ ಸ್ಪಷ್ಟನೆ ನೀಡಿ ಈ ತಿಂಗಳ ಕೊನೇ ವಾರದಲ್ಲಿ ವಿಮಾ ಕಂತು ಪಾವತಿಯಾಗಲಿದೆ ಎಂದು ಸಭೆಗೆ ತಿಳಿಸಿದರು.

ಕೆಂಪು ಕಲ್ಲು ಗಣಿಗಾರಿಕೆ: ಅರ್ಜಿ ಹಾಕಿದವರಿಗೆ ತಕ್ಷಣ ಲೈಸನ್ಸ್ ಮಂಜೂರು ಮಾಡಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ
ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆಯ ಬಗೆಗಿನ ಗೊಂದಲಕ್ಕೆ ಸರಕಾರ ಪರಿಹಾರವನ್ನು ನೀಡಿದೆ, ಈಗ ಎಲ್ಲಾ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪರವಾನಗಿ ಹೊಮದಿರುವವರು ಈಗಾಗಲೇ ಗಣಿಗಾರಿ ಆರಂಭ ಮಾಡಿದ್ದಾರೆ. ಈಗ ಎಲ್ಲೂ ಕಲ್ಲಿನ ಕೊರತೆ ಇಲ್ಲ ಆದರೆ ಗಣಿಗಾರಿಗೆ ಪರವಾನಿಗೆ ಕೋರಿ ಅರ್ಜಿ ಹಾಕಿದವರಿಗೆ ತಕ್ಷಣ ಪರವಾನಿಗೆ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿದರು. ಸಭೆಯು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಲ್ಲು ಗಣಿಗಾರಿಕೆ ವಿಚಾರ ಬಂದಾಗ ಸಭೆಯ ಗಮನ ಸೆಳೆದ ಶಾಸಕರು ಈಗಾಗಲೇ 16 ಅರ್ಜಿಗಳು ಬಾಕಿ ಇದೆ ಎಂಬ ಮಾಹಿತಿ ಇದೆ. ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಲೈಸೆನ್ಸ್ ಮಂಜೂರು‌ಮಾಡಿ ಎಂದು ಆಗ್ರಹಿಸಿದರು. 10 ದಿನದೊಳಗೆ ಲೈಸೆನ್ಸ್ ಮಂಜೂರು ಮಾಡುವಂತೆ ಸಚಿವರು ಸೂಚನೆ ನೀಡಿದರು.
ಕಲ್ಲು ಗಣಿಗಾರಿಕೆ ಗೆ ಸರಕಾರ ಪರವಾನಗಿ ನೀಡಿದರೂ ಕಲ್ಲುಗಳು ದಾರಾಳವಾಗಿ ಸಾಗಾಟವಾಗುತ್ತಿದ್ದರೂ ಕಲ್ಲಿನ ಬೆಲೆ ಕಡಿಮೆಯಾಗಿಲ್ಲ. ಸದ್ಯ ಒಂದು ಕಲ್ಲಿಗೆ 40 ರಿಂದ 45 ದರ ಪಡೆಯುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಹೆಚ್ಚಿಸಬೇಕು ಎಂದು ಶಾಸಕರು ಅಭಿಪ್ರಾಯಿಸಿದರು.

ಅಡಿಕೆ ಎಲೆ ಚುಕ್ಕಿ ರೋಗದಿಂದ ಕೃಷಿಕರು ಆತಂಕದಲ್ಲಿದ್ದಾರೆ- ಸರಕಾರ ಗಂಭೀರವಾಗಿ ಪರಿಗಣಿಸಿ: ಕೆಡಿಪಿ ಸಭೆಯಲ್ಲಿ‌ಶಾಸಕ ಅಶೋಕ್ ರೈ ಅಗ್ರಹ
ಮಂಗಳೂರು: ದ ಕ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದಲ್ಲಿ ಅಡಿಕೆ ಎಲೆ ಚುಕ್ಕಿ ರೋಗದಿಂದ ಗಿಡವೇ ನಾಶವಾಗುತ್ತಿದೆ,ಇದಕ್ಕೆ ಇದುವರೆಗೂ ಯಾವುದೇ ಔಷಧಿಯೂ ಸಿಕ್ಕಿಲ್ಲ ಈ ಕಾರಣಕ್ಕೆ ಕೃಷಿಕರು ಆತಂಕದಲ್ಲಿದ್ದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಡಿಪಿ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಸಭೆಯು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಕಳೆದ ಒಂದೆರಡು ವರ್ಷದಿಂದ ಈ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಒಂದು ಬಾರಿ ಈ ರೋಗ ಕಾಣಿಸಿಕೊಂಡರೆ ಮತ್ತೆ ಅಡಿಕೆ ಗಿಡ ಸತ್ತೇ ಹೋಗುತ್ತಿದೆ. ಕೃಷಿಕರು ಯಾವುದೇ ಕೀಟನಾಶಕ ಸಿಂಪಡನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ, ಗೊಬ್ಬರ ಹಾಕಿದರೂ ಪ್ರಯೋಜನವಿಲ್ಲ. ಈಗಾಗಲೇ ಪುತ್ತೂರಿನಲ್ಲಿ 8 ಗ್ರಾಮ ಹಾಗೂ ಸುಳ್ಯದಲ್ಲಿ 28 ಗ್ರಾಮದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಇದುವರೆಗೂ ಯಾರಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದು ಹೇಳಿದ ಶಾಸಕರು ದ ಕ ಜಿಲ್ಲೆಯಲ್ಲಿ ಅಡಿಕೆಗೆ ತೊಂದರೆಯಾದಲ್ಲಿ ಈ ಭಾಗದ ಜನರ ಬದುಕೇ ದುಸ್ತರವಾಗಲಿದೆ ಎಂದು ಹೇಳಿದರು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾ ಅಧ್ಯಕ್ಷರು ದ ಕ ಜಿಲ್ಲೆಯ ಜನಪ್ರತಿನಿಧಿಗಳು ಸಭೆ ಸೇರಿ ಇದನ್ನು ಸರಕಾರದ ಮುಂದೆ ವಿಷಯ ಮಂಡಿಸಬೇಕು. ಇದಕ್ಕೆ ಸುಲಭ ಪರಿಹಾರ ಸಾಧ್ಯವಿಲ್ಲವಾದ್ದರಿಂದ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸುವ ಎಂದು ಹೇಳಿದರು.

 

ಕೋವಿ ಪರವಾನಿಗೆ ನವೀಕರಣ ಮಾಡುತ್ತಿಲ್ಲ ಯಾಕೆ? ಕೃಷಿಕರಿಗೆ ಕೋವಿ ಅತೀ ಅಗತ್ಯ – ಯಾಕೆ ವಿಳಂಬ ಮಾಡುತ್ತಿದ್ದೀರಿ: ಶಾಸಕ ಅಶೋಕ್ ರೈ
ಮಂಗಳೂರು: ಸರಕಾರ ಈ ಹಿಂದೆ ಜಿಲ್ಲೆಯ ಕೃಷಿಕರಿಗೆ ಕೋವಿ ಪರವಾನಿಗೆಯನ್ನು ನೀಡಿತ್ತು. ಕೋವಿ ಪರವಾನಿಗೆ ಹೊಂದಿದ್ದ ವ್ಯಕ್ತಿ ಮರಣ ಹೊಂದಿದರೆ ಅವರ ಮಕ್ಕಳ ಹೆಸರಲ್ಲಿ ಕೋವಿ ಲೈಸೆನ್ಸ್ ಪೇಯಬೇಕಾಗಿದೆ ಆದರೆ ಪೊಲೀಸ್ ಇಲಾಖೆ ಲೈಸೆನ್ಸ್ ನವೀಕರಣವನ್ನು ಮಾಡುತ್ತಿಲ್ಲ ಯಾಕೆ? ಈ ಬಗ್ಗೆ ಸ್ಪಷ್ಡನೆಯನ್ನು ನೀಡುವಂತೆ ಶಾಸಕ ಅಶೋಕ್ ರೈ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೃಷಿಕರಿಗೆ ಕೋವಿ ಇಲ್ಲದೆ ಬದುಕು ಇಲ್ಲ. ಕೃಷಿಗೆ ಮಂಗಗಳ ಹಾವಳಿ, ಆನೆ ಹಾವಳಿ ಇರುತ್ತದೆ. ಅವುಗಳಿಗೆ ಕೋವಿಯಿಂದ ಶೂಟ್ ಮಾಡುವುದಿಲ್ಲ ಜಸ್ಟ್ ಕೋವಿ ತೋರಿಸಿದರೆ ಸಾಕು ಅವು ಓಡಿ ಹೋಗ್ತದೆ. ಆದರೆ ಈ ವರ್ಷ ಕೋವಿಗಳ ಲೈಸೆನ್ಸ್ ಪರವಾನಿಗೆ ನವೀಕರಣವನ್ನೇ ಮಾಡುತ್ತಿಲ್ಲ ಯಾಕೆ? ನವೀಕರಣಕ್ಕೆ ಏನು ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಎಸ್ಪಿ ಈಗಾಗಲೆ ಕೋವಿ ಪರವಾನಿಗೆಗೆ 25 ಸಾವಿರ ಅರ್ಜಿ ಬಂದಿದೆ. ಲೈಸೆನ್ಸ್ ನವೀಕರಣಕ್ಕೆ ಕೆಲವೊಂದು ನಿಬಂಧನೆಗಳನ್ನು ಅಳವಡಿಸಲಾಗಿದೆ. ನಿಬಂಧನೆಗಳಿಗೆ ಪ್ರಕಾರ ಇದ್ದಲ್ಲಿ ಲೈಸೆನ್ಸ್ ಕೊಡಲಾಗುತ್ತದೆ. ಕ್ರಿಮಿನಲ್ ಹಿನ್ನೆಲೆಇದ್ದಲ್ಲಿ ಲೈಸನ್ಸ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ ಅವರು ಹೊಸ ಪರವಾನಿಗೆ ಕೊಡಿ ಎಂದು ಕೇಳುತ್ತಿಲ್ಲ ಇದ್ದ ಲೈಸೆನ್ಸನ್ನು ನವೀಕರಣ ಮಾಡಿ ಎಂದು ಹೇಳುತ್ತಿದ್ದೇವೆ. ಕ್ರಿಮಿನಲ್ ಹಿನ್ನೆಲೆ ಇದ್ದರೆ ಕೊಡಬೇಡಿ . ಉಳಿದವರಿಗೆ ಕೊಡಬಹುದಲ್ಲ ಎಂದು ಪ್ತಶ್ನಿಸಿದರು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದೇ ಇದ್ದಲ್ಲಿ, ಕೃಷಿಕರೇ ಆಗಿದ್ದಲ್ಲಿ ಪರವಾನಿಗೆ ನೀಡಿ ಎಂದು ಸಚಿವರು ಸೂಚನೆ ನೀಡಿದರು.

ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರ ವ್ಯವಸ್ಥೆ ಮಾಡಿ: ಕೆಡಿಪಿ ಸಭೆಯಲ್ಲಿ ಆಗ್ರಹ
ಮಾಡಿಸುತ್ತೇನೆ ಎಂದ ಆರೋಗ್ಯ ಸಚಿವರು
ಪುತ್ತೂರು: ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭ ಮಾಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಡಿಪಿ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದರು. ಈಗಾಗಲೇ 28 ಮಂದಿ ರೋಗಿಗಳು ಈ ಭಾಗದಲ್ಲಿ ಇದ್ದು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂಕಷ್ಟಪಡುತ್ತಿದ್ದಾರೆ. ಹೆಚ್ಚಿನವರು ಬಡವರಾದ ಕಾರಣ ಡಯಾಲಿಸಿಸ್ ಗೆ ಕಷ್ಡವಾಗುತ್ತಿದೆ ಈ ಕಾರಣಕ್ಕೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕೂಡಲೇ ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು ದ ಕ ಜಿಲ್ಲೆಯ ಆರೋಗ್ಯಾಧಿಕಾರಿಗಳನ್ನು ಈ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂದು‌ಮನವಿ ಮಾಡಿದರು.

Team Udayaprabha
";