ಬೆಳಗಾವಿ : ಅಪ್ರಾಪ್ತ ವಯಸ್ಸಿನ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣದಲ್ಲಿ ಆರೋಪಿತನಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ತೀವ್ರಗತಿ ಪೋಕೋ ನ್ಯಾಯಾಲಯ–01 ಮಹತ್ವದ ತೀರ್ಪು ನೀಡಿದೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರೈಂ ನಂ.244/2023 ಪ್ರಕರಣಕ್ಕೆ ಸಂಬಂಧಿಸಿದಂತೆ, ವಿನಾಯಕ ಕಲ್ಲಗೌಡ ಪಾಟೀಲ (ವಯಸ್ಸು 30 ವರ್ಷ, ಸಾ: ನೇರ್ಲಿ, ತಾ: ಹುಕ್ಕೇರಿ, ಜಿ: ಬೆಳಗಾವಿ) ವಿರುದ್ಧ ಪೋಕೋ ಕಾಯ್ದೆ, ಐಪಿಸಿ ಹಾಗೂ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿವರದಂತೆ, ದಿನಾಂಕ 06-11-2023ರಂದು ಆರೋಪಿತನು ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ, ವಿಡಿಯೋ ಕಾಲ್ ಮೂಲಕ ಬಟ್ಟೆ ಬಿಚ್ಚಿ ಅಂಗಾಂಗಗಳನ್ನು ತೋರಿಸುವಂತೆ ಒತ್ತಾಯಿಸಿ, ನಿರಾಕರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಬಾಲಕಿಯಿಂದ ಅಶ್ಲೀಲ ದೃಶ್ಯಗಳನ್ನು ಪಡೆದು ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಗೋಕಾಕ ಉಪವಿಭಾಗದ ಡಿಎಸ್‌ಪಿ ಡಿ.ಹೆಚ್. ಮುಲ್ಲಾ ಅವರು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆಯಲ್ಲಿ ಒಟ್ಟು 8 ಸಾಕ್ಷಿಗಳ ಹೇಳಿಕೆ, 47 ದಾಖಲಾತಿಗಳು ಮತ್ತು ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು ಆರೋಪಿತನಿಗೆ ಪೋಕ್ಸೋ ಕಾಯ್ದೆ ಹಾಗೂ ಇತರ ಕಲಂಗಳಡಿ ವಿಭಿನ್ನ ಅವಧಿಯ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ.3,30,000/- ದಂಡ ವಿಧಿಸಿ ತೀರ್ಪು ನೀಡಿದರು. ಜೊತೆಗೆ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ರೂ.1 ಲಕ್ಷ ಪರಿಹಾರಧನ ನೀಡಲು ಆದೇಶಿಸಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.


,
,


















