ಬೆಳಗಾವಿ: ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದ್ದ ಜೋಡಿ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಜಮೀನಿನ ಆಸ್ತಿ ಹಂಚಿಕೆ ವಿವಾದವೇ ಘಟನೆಗೆ ಕಾರಣವಾಗಿದ್ದು, ಹಿರಿಯ ಸಹೋದರನ ಪತ್ನಿ (ಅತ್ತಿಗೆ) ಸೇರಿ ಹಲವರು ಸಂಚು ರೂಪಿಸಿ ಇಬ್ಬರು ಮೈದುನರ ಹತ್ಯೆ ಮಾಡಿಸಿರುವ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ದಾಳಿಯಲ್ಲಿ ಇನ್ನಿಬ್ಬರ ಮೇಲೆ ಕೊಲೆ ಯತ್ನವೂ ನಡೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ನುಗ್ಗಾನಟ್ಟಿ ಗ್ರಾಮದ ಫಕ್ಕೀರಪ್ಪ ನೀಲಪ್ಪ ರಾಮಣ್ಣವರ (60) ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಫಕ್ಕೀರಪ್ಪ ಅವರಿಗೆ ಯಲ್ಲಪ್ಪ, ಬಸಪ್ಪ ಹಾಗೂ ಲಗಮಣ್ಣ ಎಂಬ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಯಲ್ಲಪ್ಪ ಅವರ ಪತ್ನಿ ಅಣ್ಣವ್ವ ಹಲವು ವರ್ಷಗಳಿಂದ ಪತಿಯ ಮನೆಯಲ್ಲಿ ವಾಸಿಸದೆ ತವರು ಮನೆಯಲ್ಲಿ ನೆಲೆಸಿದ್ದರು. ಕುಟುಂಬದ 9 ಎಕರೆ ಜಮೀನಿನ ಪಾಲು ಹಂಚಿಕೆ ವಿಚಾರವಾಗಿ ಈ ಹಿಂದೆ ವಿವಾದ ಉಂಟಾಗಿದ್ದು, ಗ್ರಾಮ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ನಡೆದಿತ್ತು. ಬಳಿಕ ನ್ಯಾಯಾಲಯದಲ್ಲೂ ರಾಜಿ ಒಪ್ಪಂದವಾಗಿದ್ದು, ಅಣ್ಣವ್ವ ಅವರಿಗೆ ₹2 ಲಕ್ಷ ಪರಿಹಾರ ನೀಡಲಾಗಿತ್ತು. ಜೊತೆಗೆ, ಪುತ್ರ ನೀಲಕಂಠ 18 ವರ್ಷ ಪೂರೈಸಿದ ಬಳಿಕ 1 ಎಕರೆ ಜಮೀನು ನೀಡುವಂತೆ ಒಪ್ಪಂದವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 15ರಂದು ನೀಲಕಂಠನ ಪಾಲಿನ ಜಮೀನಿನ ಸರ್ವೆ ನಡೆಸಲು ಭೂಮಾಪಕರನ್ನು ಕರೆಯಿಸಿದ್ದರಿಂದ ಆರೋಪಿತರು ಅಸಮಾಧಾನಗೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜುಲೈ 16ರ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆ ಆರೋಪಿತರು ಬಡಿಗೆ, ಕಬ್ಬಿಣದ ರಾಡ್ ಹಾಗೂ ಕಲ್ಲುಗಳನ್ನು ಹಿಡಿದು ಫಕ್ಕೀರಪ್ಪ ಅವರ ಮನೆಗೆ ನುಗ್ಗಿದ್ದಾರೆ ಎನ್ನಲಾಗಿದೆ. ಮನೆಯ ಕಟ್ಟೆಯ ಮೇಲೆ ಮಲಗಿದ್ದ ಬಸಪ್ಪ ಹಾಗೂ ಅವರ ಪುತ್ರ ಬಾಳೇಶ ಅವರ ಮೇಲೆ ಮೊದಲು ಹಲ್ಲೆ ನಡೆಸಿದ ಬಳಿಕ, ಮನೆಯ ಬಾಗಿಲು ಒಡೆದು ಒಳನುಗ್ಗಿ ಲಗಮಣ್ಣ ಅವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಬಸಪ್ಪ ಮತ್ತು ಲಗಮಣ್ಣ ಅವರನ್ನು ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಬಡಿಗೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಫಕ್ಕೀರಪ್ಪ ಹಾಗೂ ಅವರ ಮೊಮ್ಮಗ ಬಾಳೇಶ ಅವರ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಲಾಗಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ, “ಜಮೀನಿನ ಪಾಲು ನೀಡದಿದ್ದರೆ ಜೀವಂತವಾಗಿ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 310/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಾಮರಾಜನ್ ಕೆ, ಹೆಚ್ಚುವರಿ ಎಸ್ ಪಿ ಬಸರಗಿ, ಬೈಲಹೊಂಗಲ ಡಿಎಸ್ ಪಿ ಸೇರಿದಂತೆ ಮುರಗೋಡ ಠಾಣೆ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


,


















