ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಭಾರಿ ಹಿನ್ನಡೆಯಾಗಿದೆ. ಪಕ್ಷವು 2027ರ ವಿಧಾನಸಭೆ ಚುನಾವಣೆಗಾಗಿ 40 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಇಬ್ಬರು ಹಾಲಿ ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಾಜ್ರಾ ಮತ್ತು ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾಣ್ಮಾಜ್ರಾ ರಾಜೀನಾಮೆ ನೀಡಿದವರಾಗಿದ್ದು, ಇಬ್ಬರೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವ ಸಾಧ್ಯತೆಯಿದೆ.
ಎಎಪಿ ತನ್ನ 2027ರ ವಿಧಾನಸಭೆ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಮರುದಿನವೇ ಈ ಬೆಳವಣಿಗೆ ಸಂಭವಿಸಿದೆ. ಪಕ್ಷ ಪ್ರಕಟಿಸಿರುವ 40 ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಇಬ್ಬರು ಶಾಸಕರಿಗೂ ಸ್ಥಾನ ನೀಡಲಾಗಿಲ್ಲ. ಇದು ಪಕ್ಷದೊಳಗಿನ ಅಸಮಾಧಾನ ಬಹಿರಂಗಗೊಳ್ಳಲು ಕಾರಣವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಎಎಪಿಯಲ್ಲಿ ಭಿನ್ನಮತದ ಮೊದಲ ಲಕ್ಷಣಗಳು ಕಾಣಿಸಿಕೊಂಡಿವೆ.
ವಾಸ್ತವವಾಗಿ, ಇಬ್ಬರೂ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬ ಸೂಚನೆಗಳು ಈ ಹಿಂದೆಯೇ ದೊರೆತಿದ್ದವು. ಅವರ ಕ್ಷೇತ್ರಗಳಲ್ಲಿ ಎಎಪಿ ಈಗಾಗಲೇ ಹೊಸ ಕ್ಷೇತ್ರ ಉಸ್ತುವಾರಿಗಳನ್ನು ನೇಮಕ ಮಾಡಿತ್ತು. ಸನೌರ್ ವಿಧಾನಸಭಾ ಕ್ಷೇತ್ರಕ್ಕೆ ರಂಜೋಡ್ ಹಡಾನಾ ಅವರನ್ನು ಉಸ್ತುವಾರಿಯಾಗಿ ನೇಮಿಸಿದ್ದರೆ, ಸಮಾನಾ ಕ್ಷೇತ್ರಕ್ಕೆ ಶಿರೋಮಣಿ ಅಕಾಲಿದಳದ ಮಾಜಿ ಹಿರಿಯ ನಾಯಕ ಸುರ್ಜಿತ್ ಸಿಂಗ್ ರಖ್ರಾ ಅವರನ್ನು ಪಕ್ಷದ ಹೈಕಮಾಂಡ್ ನೇಮಿಸಿತ್ತು. ತಮ್ಮದೇ ಕ್ಷೇತ್ರಕ್ಕೆ ಹೊಸ ಉಸ್ತುವಾರಿಯನ್ನು ನೇಮಕ ಮಾಡಿರುವುದು ರಾಜಕೀಯ ಪ್ರಭಾವಕ್ಕೆ ಧಕ್ಕೆಯಾಗಿದೆ ಎಂದು ಭಾವಿಸಿದ್ದ ಚೇತನ್ ಸಿಂಗ್ ಜೌರಮಾಜ್ರಾ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಸನೌರ್ ಶಾಸಕ ಹರ್ಮೀತ್ ಸಿಂಗ್ ಪಠಾಣ್ಮಾಜ್ರಾ ಅವರಿಗೂ ಪಕ್ಷದ ನಾಯಕತ್ವದೊಂದಿಗಿನ ಸಂಬಂಧ ಹಳಸಿತ್ತು. ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿವಾದವೂ ಮುಂದಿನ ಚುನಾವಣೆಯಲ್ಲಿ ಎಎಪಿ ಟಿಕೆಟ್ ಪಡೆಯುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು.
ರಾಜೀನಾಮೆ ವಿಚಾರವನ್ನು ಇಬ್ಬರೂ ಶಾಸಕರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದಾರೆ. ಚೇತನ್ ಸಿಂಗ್ ಜೌರಮಾಜ್ರಾ ಫೇಸ್ಬುಕ್ನಲ್ಲಿ, “ನಾನು, ಚೇತನ್ ಸಿಂಗ್ ಜೌರಮಾಜ್ರಾ, ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಹರ್ಮೀತ್ ಸಿಂಗ್ ಪಠಾಣ್ಮಾಜ್ರಾ, “ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಹರ್ಮೀತ್ ಸಿಂಗ್ ಪಠಾಣ್ಮಾಜ್ರಾ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದರು. ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಅವರು ತಲೆಮರೆಸಿಕೊಂಡಿದ್ದರು. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿದ್ದವು. ಜಿರಕ್ಪುರದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ, ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸನೌರ್ ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪಠಾನ್ಮಜ್ರಾ ಅವರು ತಾನು ವಿಚ್ಛೇದಿತನೆಂದು ಸುಳ್ಳು ಹೇಳಿ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದಲ್ಲದೆ, ಈಗಾಗಲೇ ವಿವಾಹಿತರಾಗಿದ್ದರೂ 2021ರಲ್ಲಿ ಆಕೆಯನ್ನು ಮದುವೆಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಚೇತನ್ ಸಿಂಗ್ ಜೌರಮಾಜ್ರಾ ಅವರು ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇದು ಸಮಾನಾ ಕ್ಷೇತ್ರದ ಶಾಸಕರಿಗೆ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿತ್ತು. ಸಚಿವ ಸ್ಥಾನದಿಂದ ಕೈಬಿಟ್ಟ ನಿರ್ಧಾರದ ಬಗ್ಗೆಯೂ ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಎಪಿ ಈಗಾಗಲೇ ಕ್ಷೇತ್ರಮಟ್ಟದಲ್ಲಿ ನಾಯಕತ್ವದ ಪುನರ್ವ್ಯವಸ್ಥೆ ಹಾಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ಇಬ್ಬರು ಹಾಲಿ ಶಾಸಕರ ರಾಜೀನಾಮೆ ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಿದೆ. ಇಬ್ಬರೂ ಶಾಸಕರು ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿರುವುದು ಅವರ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಇಡೀ ಪಂಜಾಬ್ ರಾಜಕೀಯದಲ್ಲೂ ತೀವ್ರ ಸಂಚಲನ ಸೃಷ್ಟಿಸಿದೆ.
ಚಂಡೀಗಢ: ಮುಂಬರುವ 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಆಮ್ ಆದ್ಮಿ ಪಾರ್ಟಿಗೆ (ಆಪ್) ದೊಡ್ಡ ರಾಜಕೀಯ ಆಘಾತ ಎದುರಾಗಿದೆ.
ಸೋಮವಾರ ಬೆಳಗ್ಗೆ ಆಪ್ನ ಅಮಾನತುಗೊಂಡಿದ್ದ ಶಾಸಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಭಾನುವಾರವಷ್ಟೇ ಆಪ್ಗೆ ರಾಜೀನಾಮೆ ನೀಡಿದ್ದ ಇನ್ನಿಬ್ಬರು ಶಾಸಕರು ಸಹ ಅವರೊಂದಿಗೆ ಬಿಜೆಪಿಗೆ ಸೇರುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದಾರೆ.
ಅಮೃತಸರ ಉತ್ತರ ಕ್ಷೇತ್ರದ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್, ಪಟಿಯಾಲ ಜಿಲ್ಲೆಯ ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಾಜ್ರಾ ಹಾಗೂ ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾನ್ಮಾಜ್ರಾ ಅವರು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ತೆರಳಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರಿಂದ ಸಾಂಪ್ರದಾಯಿಕ ಸದಸ್ಯತ್ವ ಚೀಟಿ ಪಡೆದು, ಕೊರಳಿಗೆ ಬಿಜೆಪಿ ಶಾಲು ಹಾಗೂ ಧ್ವಜ ಧರಿಸಿ ನಗೆಮುಖದಿಂದ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸದಾಗಿ ಬಿಜೆಪಿ ಸೇರಿದ ಈ ಮೂವರು ನಾಯಕರು ಇತರ ಬಿಜೆಪಿ ಮುಖಂಡರೊಂದಿಗೆ ಕೈಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಶನಿವಾರವಷ್ಟೇ ಆಪ್ ಮುಂಬರುವ ಚುನಾವಣೆಗೆ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಧುರಿ ಕ್ಷೇತ್ರದಿಂದ ಮುಖ್ಯಮಂತ್ರಿ ಭಗವಂತ್ ಮಾನ್, ಕೋಟ್ಕಪುರದಿಂದ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಹಾಗೂ ಪ್ರಸ್ತುತ ಜೈಲಿನಲ್ಲಿರುವ ಸಚಿವ ಸಂಜೀವ್ ಅರೋರಾ ಅವರನ್ನು ಲೂಧಿಯಾನ ವೆಸ್ಟ್ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಲಾಗಿತ್ತು.
ಆಪ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಸಾಲು ಸಾಲು ರಾಜೀನಾಮೆ ಹಾಗೂ ಮುಖಂಡರ ಪಕ್ಷಾಂತರ ನಡೆದಿರುವುದು ಆಪ್ಗೆ ಭಾರಿ ಹಿನ್ನಡೆಯನ್ನುಂಟುಮಾಡಿದೆ.


,


















