ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ವ್ಯವಸ್ಥೆ ಮಹತ್ವದ ಮತ್ತು ಕಠಿಣ ಸಂದೇಶ ನೀಡಿದೆ. ಈ ಪ್ರಕರಣದ 12 ಮಂದಿ ಆರೋಪಿಗಳಿಗೆ ತಲಾ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಈ ತೀರ್ಪು ಸಮಾಜಕ್ಕೆ ನೀಡಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಿಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ ಕುರಿತು, ವಂಟಮೂರಿ ಗ್ರಾಮದಲ್ಲಿ ನಡೆದ ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿ, ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಮನಸ್ಸನ್ನು ಕಲುಷಿತಗೊಳಿಸಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ತನಿಖಾ ವರದಿಗಳನ್ನು ಪರಿಗಣಿಸಿ ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ಮಹಿಳಾ ಸುರಕ್ಷತೆ ಮತ್ತು ಮಾನವ ಗೌರವದ ರಕ್ಷಣೆಗೆ ನ್ಯಾಯಾಲಯದ ಈ ತೀರ್ಪು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದ ಹಾಲ್‌ನಲ್ಲಿ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಕಣ್ಣೀರಿಟ್ಟರು. ಇತ್ತ, ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, ಇದು ಮುಂದಿನ ದಿನಗಳಲ್ಲಿ ಇಂತಹ ಅಪರಾಧಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


,
,


















