ಬೆಳಗಾವಿ: ಕೌಟುಂಬಿಕ ಆಸ್ತಿ ಕಲಹದಿಂದ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ನಿವೃತ್ತ ಯೋಧ ಹಾಗೂ ಅವರ ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನಮ್ಮನ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಅವರಾದಿ ಗ್ರಾಮದ ನಿವಾಸಿ, ಮಾಜಿ ಸೈನಿಕ ರುದ್ರಪ್ಪ ಕುಂದರಗಿ(67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ ಕೊಲೆಯಾದವರು. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರುದ್ರಪ್ಪ ಕುಂದರಗಿ ಹಾಗೂ ಅವರ ಸಹೋದರರ ಮಧ್ಯ ಹಲವು ದಿನಗಳಿಂದ ಆಸ್ತಿ ಹಂಚಿಕೆಗೆ ಸಂಬಂಧಿಸಿ ಕಲಹ ಇತ್ತು. ಈ ಕುರಿತು ಕಾಗದ ಪತ್ರಗಳ ಪರಿಶೀಲನೆಗಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದ ವೇಳೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರುದ್ರಪ್ಪ ಅವರ ಇಬ್ಬರು ಸಹೋದರರು ಹಾಗೂ ಸಹೋದರನ ಪುತ್ರ ಮಾರಕಾಸ್ತ್ರಗಳಿಂದ ರುದ್ರಪ್ಪ ಹಾಗೂ ಶಶಿಕಲಾ ಮೇಲೆ ಈ ಕೃತ್ಯ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕಣ್ಣೆದುರೇ ಈ ಭೀಕರ ಕೃತ್ಯ ನಡೆದಿದ್ದು, ರಕ್ತದ ಮಡುವಿನಲ್ಲಿ ಬಿದ್ದ ತಂದೆ-ಮಗಳು ಪ್ರಾಣ ಬಿಟ್ಟಿದ್ದಾರೆ.
ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.


,


















