ಮೈಸೂರು: ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಸ್ವಾಮಿ ಯುಕ್ತೇಶಾನಂದಜೀ ನಿಯೋಜನೆಗೊಂಡಿದ್ದಾರೆ.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸ್ವಾಮಿ ಯುಕ್ತೇಶಾನಂದಜೀ ಅವರು ಸುಮಾರು 12 ವರ್ಷಗಳ ಕಾಲ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದು, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಪೊನ್ನಂಪೇಟೆ, ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದಲ್ಲಿಯೂ ಸೇವೆ ಸಲ್ಲಿಸಿದ್ದರು. ಅಧಿಕಾರ ಸ್ವೀಕರಿಸಿದ ಯುಕ್ತೇಶಾನಂದಜೀ ಅವರಿಗೆ ಈ ಸಂದರ್ಭದಲ್ಲಿ ಅವರಿಗೆ ಆತ್ಮೀಯ ಸ್ವಾಗತ ಕೋರಿ, ಮುಂದಿನ ಸೇವಾಕಾರ್ಯಗಳಿಗೆ ಶುಭ ಹಾರೈಸಲಾಯಿತು.
ನಿರ್ಗಮಿತ ಶ್ರೀಗಳು ಬೆಂಗಳೂರಿನ ಬಸವನ ಗುಡಿಯ ರಾಮಕೃಷ್ಣ ಮಠದ ಜವಾಬ್ದಾರಿಯನ್ನು ಶೀಘ್ರದಲ್ಲೇ ವಹಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಮುಕ್ತಿದಾನಂದಜೀ ಗುರುವಾರ ಜವಾಬ್ದಾರಿಯನ್ನು ಯುಕ್ತಶಾನಂದರಿಗೆ ಹಸ್ತಾಂತರಿಸಿದರು. 13 ವರ್ಷಗಳ ಕಾಲ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ ಯುಕ್ತೇಶಾನಂದರಿಗೆ ಶತಮಾನ ಪೂರ್ಣಗೊಳಿಸಿದ ಆಶ್ರಮದ ಸಾರಥ್ಯ ದೊರಕಿದೆ. ನೂತನ ಅಧ್ಯಕ್ಷರ ಸ್ವಾಗತ ಮತ್ತು ನಿರ್ಗಮಿತ ಅಧ್ಯಕ್ಷರ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ ಸಂಜೆ ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಸರಳವಾಗಿ ನೆರವೇರಿತು. ಆಶ್ರಮದ ಸಾಧುಗಳು, ಭಕ್ತರು, ಸ್ವಯಂಸೇವಕರು, ಹಿತೈಷಿಗಳು ಸಾಕ್ಷಿಯಾದರು.

ಸುದೀರ್ಘ ಸೇವೆ: ಶ್ರೀರಾಮಕೃಷ್ಣ ವಿದ್ಯಾಶಾಲೆಯ ನಿವೃತ್ತ ಪಾಂಶುಪಾಲ ಕೀರ್ತಿಕುಮಾರ್ ಮಾತನಾಡಿ, ಮುಕ್ತಿದಾನಂದಜೀ 4 ದಶಕ ಕಾಲ ಆಶ್ರಮದ ಸೇವೆ ಮಾಡಿದ್ದಾರೆ. 1982ರಲ್ಲಿ ಮೈಸೂರು ಆಶ್ರಮಕ್ಕೆ ಸೇರ್ಪ ಡೆಗೊಂಡ ಅವರು, ಬಳಿಕ 2012ರಲ್ಲಿ ಮೈಸೂರು ಆಶ್ರಮಕ್ಕೆ ಅಧ್ಯಕ್ಷರಾದರು. ಅವರ ಸುದೀರ್ಘ ಸೇವೆಯಲ್ಲಿ ಆಶ್ರಮದ ಚಟುವಟಿಕೆಗಳು ವಿಸ್ತರಣೆ ಗೊಂಡಿವೆ. ಅನೇಕ ಅಡೆತಡೆ, ತೀವ್ರ ವಿರೋಧಗಳು ಬಂದರೂ ವಿವೇಕ ಸ್ಮಾರಕ ಮಾಡುವಲ್ಲಿ ಮುಕ್ತಿದಾನಂದಜೀ ಪಾತ್ರ ದೊಡ್ಡದು ಎಂದರು.
ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅವರನ್ನು ಗುರುವಾರ ಸಂಜೆ ಗೌರವಿಸಿ ಬೀಳ್ಕೊಡಲಾಯಿತು. ನೂತನ ಅಧ್ಯಕ್ಷ ಸ್ವಾಮಿ ಯುಕ್ತೇಶಾನಂದಜೀ ಸೇರಿದಂತೆ ಇನ್ನಿತರ ಆಶ್ರಮಗಳ ಸಾಧು ಸಂತರು ಇದ್ದರು.
ಪರಿಶ್ರಮ ದೊಡ್ಡದು: ದಾವಣಗೆರೆಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ ಮಾತನಾಡಿ, 43 ವರ್ಷ ಆಶ್ರಮವನ್ನು ಮುನ್ನಡೆಸಿರುವ ಮುಕ್ತಿದಾನಂದಜೀ ಗರಡಿಯಲ್ಲಿ ಅನೇಕರು ಬೆಳೆದು ಸಾಧು ಸಂತರಾಗಿದ್ದಾರೆ. ವಿದ್ಯಾಶಾಲೆಯೂ ಪ್ರಗತಿ ಸಾಧಿಸಿದೆ. ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಆಶ್ರಮ ಸ್ಥಾಪನೆಯಲ್ಲಿ ಪರಿಶ್ರಮ ದೊಡ್ಡದು ಎಂದರು. ಬುಡಕಟ್ಟು ಮಕ್ಕಳಿಗಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ಶಾಲೆ ತೆರೆದು ಶೈಕ್ಷಣಿಕ ಪ್ರಗತಿ ನೆರವಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲೂ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲೂ ಯಾರ ವಿರುದ್ದವೂ ಟೀಕೆ ಮಾಡದೆ, ಕಾರ್ಯ ನಿರ್ವಹಿಸಿದ್ದಾರೆಂದರು.
ಸಹನಾಗುಣಕ್ಕೆ ಅನ್ವರ್ಥ: ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ರಿಮೆ) ಮುಖ್ಯಸ್ಥ ಸ್ವಾಮಿ ಮೇಧಾನಂದಜೀ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಧನೆ ಮಾಡುವ ನಿಟ್ಟಿನಲ್ಲಿ
ಮುಕ್ತಿದಾನಂದರು ಆದರ್ಶಪ್ರಾಯರು ಎಂದರು. ಬೆಂಗಳೂರು ಬಸವನಗುಡಿ ಅಶ್ರಮ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಾನಂದಜೀ, ರಾಮಕೃಷ್ಣ ವಿದ್ಯಾಶಾಲೆ ಮುಖ್ಯಸ್ಥ ಮಹಿಪಾಲಾನಂದಜೀ, ತುಮಕೂರಿನ ಸ್ವಾಮಿ ವೀರೇಶಾನಂದಜೀ ಇತರರಿದ್ದರು.


,


















