| Latest Version 9.0.7 |

National News

ಪಂಜಾಬ್ ಸಿಎಂ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು: ರಾಹುಲ್ ಗಾಂಧಿ ಗಂಭೀರ ಆರೋಪ

ಸಂಗ್ರೂರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆ ನಿಮಿತ್ತ ಸಂಗ್ರೂರ್‌ನಲ್ಲಿ ಆಯೋಜಿಸಿದ್ದ ಇನ್ಸಾಫ್ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ‘ಲೋಕಸಭೆಯಲ್ಲಿ ಭಗವಂತ್ ಮಾನ್ ನನ್ನೊಂದಿಗೆ ಕುಳಿತು ಹಾಸ್ಯ ಮಾಡುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಅವರ ಬಾಯಿಯಿಂದ ಮದ್ಯದ ವಾಸನೆ ಬರುತ್ತಿತ್ತು ‘ಎಂದು ಹೇಳಿದ್ದಾರೆ.

ಮದ್ಯ ಸೇವಿಸುವುದು ಅವರ ವೈಯಕ್ತಿಕ ವಿಚಾರ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಮಾದಕ ವಸ್ತುಗಳ ಹಾವಳಿ ವಿರುದ್ಧ ಹೋರಾಡಬೇಕಾದರೆ, ರಾಜ್ಯದ ಮುಖ್ಯಮಂತ್ರಿಯೇ ಪ್ರತಿದಿನ ಸಂಜೆ ಮದ್ಯದ ಅಮಲಿನಲ್ಲಿರಬಾರದು. ಪಂಜಾಬ್ ಜನರ ನೋವನ್ನು ಅರ್ಥಮಾಡಿಕೊಂಡು ಹೋರಾಡುವ ನಾಯಕ ನಮಗೆ ಬೇಕು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಮ್ ಆದ್ಮ ‘ಹೀನಮಟ್ಟದ ವೈಯಕ್ತಿಕ ದಾಳಿ’ ಎಂದು ಟೀಕಿಸಿದೆ. ಹಿರಿಯ ನಾಯಕರೊಬ್ಬರ ಕುರಿತು ಈ ರೀತಿಯ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದೆ.

ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಮಾತನಾಡಿ, ಇಂತಹ ಆರೋಪಗಳನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ರ್ಯಾಲಿ ವೇಳೆ ಅಂಗಡಿಗಳನ್ನು ಬಿಜೆಪಿ ‘ಬಲವಂತವಾಗಿ’ ಮುಚ್ಚಿಸಿದೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರ ಮೇಲೆಯೂ ಮಾದಕ ದ್ರವ್ಯ ಸೇವನೆಯಂತಹ ಆರೋಪಗಳಿವೆ. ಆದರೆ, ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರಂತಹ ಉನ್ನತ ಮಟ್ಟದ ನಾಯಕರು ಇಷ್ಟು ಕೀಳುಮಟ್ಟದ ಹೇಳಿಕೆಗಳನ್ನು ನೀಡಬಾರದು ಎಂಬುದು ನನ್ನ ಅಭಿಪ್ರಾಯ’ ಎಂದು ಭಾರದ್ವಾಜ್‌ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಈ ರೀತಿಯ ಹೀನಮಟ್ಟದ ವೈಯಕ್ತಿಕ ದಾಳಿಯು ಅವರ ರಾಜಕೀಯ ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

Team Udayaprabha
";