| Latest Version 9.0.7 |

State News

2026ರ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ನಿನಾದ ಉಮೇಶ ಮುಂಡಳ್ಳಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

 

ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಭಟ್ಕಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಜಂಟಿ ಸಹಯೋಗದಲ್ಲಿ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ 2026ನೇ ಸಾಲಿನ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ನಿನಾದ ಉಮೇಶ ನಾಯ್ಕ ಮುಂಡಳ್ಳಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

 

ಪಂದ್ಯಾವಳಿಯಲ್ಲಿ ವಿಜೇತಳಾದ ನಿನಾದಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೆಂಕಟೇಶ ನಾಯ್ಕ ಅವರು ಬಹುಮಾನ ವಿತರಿಸಿ ಅಭಿನಂದಿಸಿದರು.

 

ಇತ್ತೀಚೆಗೆ ಕಾರವಾರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಸೃಜನಶೀಲ ಬರವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ನಿನಾದ ರಾಜ್ಯಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

 

ಸಾಹಿತ್ಯ ಮತ್ತು ಸಂಗೀತದ ಜೊತೆಗೆ ಕ್ರೀಡೆಯಲ್ಲಿಯೂ ತನ್ನ ಪ್ರತಿಭೆಯನ್ನು ಮೆರೆದಿರುವ ನಿನಾದ, ಭಾವಗೀತೆ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಮತ್ತು ಶಿಕ್ಷಕಿ, ಕವಯಿತ್ರಿ ರೇಷ್ಮಾ ಉಮೇಶ ದಂಪತಿಯ ಪುತ್ರಿ.

 

ಬಹುಮುಖ ಪ್ರತಿಭೆಯ ಮೂಲಕ ಒಂದರ ನಂತರ ಮತ್ತೊಂದು ಸಾಧನೆಯ ಮೆಟ್ಟಿಲೇರುತ್ತಿರುವ ನಿನಾದಳ ಸಾಧನೆ ಚಿತ್ರಾಪುರ, ಮುಂಡಳ್ಳಿ ಗ್ರಾಮಗಳ ಜನತೆಗೆ ಹಾಗೂ ಶ್ರೀವಲ್ಲಿ ಪ್ರೌಢಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು, ಊರಿನ ನಾಗರಿಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ ಮುಂದಿನ ಹಂತಗಳಲ್ಲಿಯೂ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

Team Udayaprabha
";