| Latest Version 9.0.7 |

State News

ಕಿರಿಯರ ಪ್ರತಿಭೆಗೆ ಹಿರಿಯರ ಮೆಚ್ಚುಗೆ… ತೀರ್ಪುಗಾರರಾಗಿ ಹಳೆ ವಿದ್ಯಾರ್ಥಿಗಳು – ತೆರೆಸಿಯನ್ ಗಾಟ್ ಟ್ಯಾಲೆಂಟ್‌ಗೆ ವಿಶೇಷ ಮೆರುಗು!

ಶಂಕರ ನಾರಾಯಣ: ALUMNI JURIES for TERESIAN GOT TALENT.. ಒಮ್ಮೆ ಅಕ್ಷರ ಕಲಿತ ಅಂಗಳಕ್ಕೆ ಮತ್ತೆ ಮರಳಿ, ತಮ್ಮ ಕಿರಿಯರ ಪ್ರತಿಭೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ ಹಳೆ ವಿದ್ಯಾರ್ಥಿಗಳು…

ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್‌ ಶಂಕರನಾರಾಯಣ ಇಲ್ಲಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿರುವ ಸುಪ್ತ ಹಾಗೂ ವೈವಿಧ್ಯಮಯ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ತೆರೆಸಿಯನ್ ಗಾಟ್ ಟ್ಯಾಲೆಂಟ್’ ಎಂಬ ವಿಶೇಷ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜೂನಿಯರ್, ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ವಿಭಾಗಗಳಾಗಿ ವಿಂಗಡಿಸಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಪ್ರತಿಭೆಗಳನ್ನು ವೇದಿಕೆಯ ಮೇಲೆ ಅನಾವರಣಗೊಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರೆ, ಪೋಷಕರು ಉಪಸ್ಥಿತರಿದ್ದು ಮಕ್ಕಳ ಕಲಾಪ್ರದರ್ಶನವನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದ ಅತ್ಯಂತ ವಿಶೇಷ ಆಕರ್ಷಣೆಯಾಗಿದ್ದುದು ಇದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇಂದು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡಿರುವ ಹಳೆ ವಿದ್ಯಾರ್ಥಿಗಳು ತೀರ್ಪುಗಾರರಾಗಿ ಆಗಮಿಸಿ ತಾವು ಕಲಿತು ಬೆಳೆದ ಸಂಸ್ಥೆಯ ಅಂಗಳಕ್ಕೆ ಮತ್ತೆ ಹೆಜ್ಜೆಯಿಟ್ಟು, ತಮ್ಮ ಕಿರಿಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಸಂಸ್ಥೆಯೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ನೆನಪಿಸಿಕೊಂಡರು.

 

ತಾವು ಕಲಿತ ಸಂಸ್ಥೆಗೆ ಮರಳಿದ ಸಂತಸ ಹಾಗೂ ಪ್ರತಿಭೆಯನ್ನು ಗುರುತಿಸುವ ಅವಕಾಶ ಅವರಲ್ಲಿ ವಿಶೇಷ ಸಂಭ್ರಮವನ್ನು ಮೂಡಿಸಿತು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಸಂಸ್ಥಾಪಕದ್ವಯರಾದ ಶಮಿತಾ ರಾವ್ ಹಾಗೂ ರೆನಿಟಾ ಲೋಬೋ ಅವರು ಸ್ಮರಣಿಕೆ ನೀಡಿ ಆತ್ಮೀಯವಾಗಿ ಗೌರವಿಸಿದರು. ಸಂಸ್ಥೆಯಲ್ಲಿ ಕಲಿತು ಬೆಳೆದ ವಿದ್ಯಾರ್ಥಿಗಳನ್ನು ಮತ್ತೆ ತಮ್ಮ ಮಕ್ಕಳಂತೆ ಪ್ರೀತಿಯಿಂದ ಸತ್ಕರಿಸಿದ ಈ ಕ್ಷಣವು ಕಾರ್ಯಕ್ರಮಕ್ಕೆ ಮತ್ತಷ್ಟು ಭಾವನಾತ್ಮಕ ಮೆರುಗು ನೀಡಿತು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ, ಹಳೆ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ಈ ಕಾರ್ಯಕ್ರಮ ಯಶಸ್ಸು ಗಳಿಸಿತು.

Team Udayaprabha
";