ಮೈಸೂರು: ಸಾರ್ವಜನಿಕ ಕಾರ್ಯಕ್ರಮದ ವೇಳೆ ಅಸ್ವಸ್ಥಗೊಂಡ ವೃದ್ಧ ಮಹಿಳಾ ಕಾರ್ಯಕರ್ತೆಯ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವತಃ ಆಕೆಯ ಆರೋಗ್ಯ ವಿಚಾರಿಸಿ ಚಿಕಿತ್ಸೆ ಹಾಗೂ ಆರೈಕೆಗೆ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದ ವೇಳೆ ಅಸ್ವಸ್ಥಗೊಂಡ ಮಹಿಳೆಯನ್ನು ನಂಜನಗೂಡಿನ ಬಿಜೆಪಿ ಕಾರ್ಯಕರ್ತೆ, 70 ವರ್ಷ ದಾಟಿದ ಪ್ರೇಮಾ ಕೆ. ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ಶುಕ್ರವಾರ ನಡೆದ ಎಲ್ಇಡಿ ಡೋಮ್ ತಾರಾಲಯ (LED Dome Planetarium) ಹಾಗೂ ಕಾಸ್ಮಾಲಜಿ ಎಜುಕೇಶನ್ ಆ್ಯಂಡ್ ರಿಸರ್ಚ್-ಟ್ರೈನಿಂಗ್ ಸೆಂಟರ್ (COSMOS) ಯೋಜನೆಯಡಿ ಸ್ಥಾಪಿಸಲಾದ ದತ್ತಾಂಶ ವಿಶ್ಲೇಷಣೆ ತರಬೇತಿ ಮತ್ತು ಖಗೋಳಶಾಸ್ತ್ರ ಸಂಪನ್ಮೂಲ ಕೇಂದ್ರದ (DATARC) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರೇಮಾ ಅವರು ಆಗಮಿಸಿದ್ದರು.
ಪ್ರೇಮಾ ಅವರಿಗೆ ಇದ್ದಕ್ಕಿದ್ದಂತೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಅವರು ಕುಸಿದು ಬೀಳುವ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಅವರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದರು.ಅವರ ಪರಿಸ್ಥಿತಿಯನ್ನು ಗಮನಿಸಿ ಜ್ಯೂಸ್ ತರಿಸಿ ನೀಡಿದರು. ಅಲ್ಲದೆ, ಅವರಿಗೆ ಅಗತ್ಯ ಆರೋಗ್ಯ ನೆರವು ದೊರೆಯುವಂತೆ ಮಾಡಲು ಖುದ್ದು ಗಮನಹರಿಸಿದರು. ತಮ್ಮ ವೈದ್ಯರಿಗೂ ಮಹಿಳೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚನೆ ನೀಡಿದರು. ಮಹಿಳೆಗೆ ಎಲೆಕ್ಟ್ರೋಲೈಟ್ ದ್ರಾವಣ ನೀಡಿ, ಅಗತ್ಯ ನೆರವು ಒದಗಿಸುವಂತೆ ಸ್ವತಃ ಖಚಿತಪಡಿಸಿಕೊಂಡರು. ಪ್ರೇಮಾ ಅವರು ಸುಧಾರಿಸಿಕೊಂಡ ಬಳಿಕ, ‘ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಯಾವುದೇ ಆತಂಕ ಬೇಡ’ ಎಂದು ಧೈರ್ಯದ ಮಾತುಗಳನ್ನು ಹೇಳಿ ಪ್ರಧಾನಿಗಳು ಅಲ್ಲಿಂದ ನಿರ್ಗಮಿಸಿದರು. ಪ್ರಧಾನಿಗಳ ಕಾಳಜಿ ಮತ್ತು ಪ್ರೀತಿಯನ್ನು ಕಂಡು ಹಿರಿಯ ಕಾರ್ಯಕರ್ತೆ ಪ್ರೇಮಾ ಅವರು ಭಾವುಕರಾದರು. ವೃದ್ಧ ಕಾರ್ಯಕರ್ತೆಯೊಬ್ಬರು ರ್ಯಾಲಿಯಲ್ಲಿ ಅಸ್ವಸ್ಥಗೊಂಡಾಗ ಪ್ರಧಾನಿ ತೋರಿದ ಈ ಕಾಳಜಿ ಮಾನವೀಯ ನಡೆ ಎಂದು ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇದ್ದರು.
ಬೆಂಗಳೂರಿನಲ್ಲೂ ಮೋದಿ ಕಾರ್ಯಕ್ರಮ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಪಿಂಕ್ ಲೈನ್ನ ಪ್ರಮುಖ ಭಾಗವನ್ನು ಉದ್ಘಾಟಿಸಿದ್ದರು. ಬಳಿಕ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿ, ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ-ಬಿ) ನಿಲ್ದಾಣಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಧಾನಿ ಜೊತೆ ಮೆಟ್ರೊದಲ್ಲಿ ಪ್ರಯಾಣಿಸಿದರು. ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ ಬೆಂಗಳೂರು)ಗೆ ಇಬ್ಬರೂ ತೆರಳಿ, ‘ಅಡ್ವಾನ್ಸಿಂಗ್ ಕರ್ನಾಟಕ’ (Advancing Karnataka) ಹೆಸರಿನ ವೇಗವರ್ಧಿತ ಸಾರಿಗೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ನಮ್ಮ ಮೆಟ್ರೊದ ಪಿಂಕ್ ಲೈನ್ನ 7.5 ಕಿ.ಮೀ. ಉದ್ದದ ಮೇಲ್ಸೇತುವೆ ಮಾರ್ಗವನ್ನು ಉದ್ಘಾಟಿಸಿದರು. ಕಾಳೇನ ಅಗ್ರಹಾರದಿಂದ ಎಸ್ಜಿ ಪಾಳ್ಯದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಬೆಂಗಳೂರಿನ ಮೆಟ್ರೊ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ.
Udaya Prabha > State News > ಮೈಸೂರು : ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ 70 ವರ್ಷದ ವೃದ್ಧೆಗೆ ಜ್ಯೂಸ್ ಕೊಟ್ಟು ಉಪಚಾರ ಮಾಡಿದ ಪ್ರಧಾನಿ ಮೋದಿ
ಮೈಸೂರು : ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ 70 ವರ್ಷದ ವೃದ್ಧೆಗೆ ಜ್ಯೂಸ್ ಕೊಟ್ಟು ಉಪಚಾರ ಮಾಡಿದ ಪ್ರಧಾನಿ ಮೋದಿ
Team Udayaprabha14/11/2026
posted on

the authorTeam Udayaprabha
All posts byTeam Udayaprabha
Leave a reply

,
,


















