ಬೆಳಗಾವಿ: ಮದುವೆಯಾಗುವುದಾಗಿ ಅಪ್ರಾಪ್ತ ಬಾಲಕಿಯನ್ನು ನಂಬಿಸಿ ತನ್ನ ಬೈಕಿನಲ್ಲಿ ಅಪಹರಿಸಿ ತನ್ನ ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಘಟನೆ ಬಗ್ಗೆ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇಲೆ ಶಹಾಪುರ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದರು. 2021 ಆಗಸ್ಟ್ 9 ರಂದು ಮಧ್ಯಾಹ್ನ 3 ಗಂಟೆಗೆ ಆರೋಪಿ ಖಾಸಭಾಗ ಭಾರತನಗರ 5 ನೇ ಕ್ರಾಸ್‌ನ ಆನಂದ ಶಿವಾಜಿ ಜಂತಿಕಟ್ಟಿ (25) ಎಂಬುವನು ಸಂತ್ರಸ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ತನ್ನ ಮೋಟಾರಸೈಕಲ್‌ನಲ್ಲಿ ಅಪಹರಿಸಿ ಹಿರೇಬಾಗೇವಾಡಿಯ ಹಲಗಾದಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಕರೆದೊಯ್ದು ಅಲ್ಲಿ ಬಚ್ಚಿಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.
ಅಂದಿನ ಶಹಾಪುರ ಠಾಣಾ ಪಿಐ ಎಚ್. ವೈ ಕುದ್ರೆಮನಿ ಅವರು ಪ್ರಕರಣವನ್ನು ದಾಖಲಿಸಿದ್ದರು. ಮುಂದಿನ ತನಿಖಾಧಿಕಾರಿ ವಿನಾಯಕ ಬಡಿಗೇರ ಅವರು ಪ್ರಕರಣದ ತನಿಖೆ ನಡೆಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ ಪುಷ್ಪಲತಾ ಅವರು ವಿಚಾರಣೆ ನಡೆಸಿ 9 ಸಾಕ್ಷಿಗಳು, 45 ದಾಖಲೆಗಳ ಆಧಾರದಲ್ಲಿ ಹಾಲಿ ರೈತಗಲ್ಲಿ ಜುನೇ ಬೆಳಗಾವಿಯಲ್ಲಿ ಇರುವ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿದ್ದಾರೆ.
ಕಲಂ 36 ಪ್ರಕಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ 20 ಸಾವಿರ ದಂಡ, ದಂಡ ತಪ್ಪಿದರೆ ಮತ್ತೊಂದು ವರ್ಷ ಜೈಲುಶಿಕ್ಷೆ ಕಲಂ 368 ರಡಿ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.


,
,


















