| Latest Version 9.0.7 |

State News

ಶಿವಪುರ ಕುಲಾಲ ಸಂಘ : 10ನೇ ವಾರ್ಷಿಕ ಸಮಾವೇಶ –ವಿದ್ಯಾರ್ಥಿ ವೇತನ ವಿತರಣೆ, ಸಾಧಕರ ಸನ್ಮಾನ

ಶಿವಪುರ: ಕುಲಾಲ ಸಂಘ (ರಿ.) ಶಿವಪುರ ಸಂಘದ 10ನೇ ವರ್ಷದ ವಾರ್ಷಿಕ ಮಹಾ ಸಮಾವೇಶ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಅದ್ಧೂರಿಯಾಗಿ ನವೆಂಬರ್ 16, 2025 (ಭಾನುವಾರ) ರಂದು ಮುಳ್ಳುಗುಡ್ದೆ ಶಾಲಾ ಸಭಾ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮಾರಂಭವು ಸಮುದಾಯ ಸಂಘಟನೆ, ಪ್ರತಿಭೆಗಳ ಪುರಸ್ಕಾರ ಮತ್ತು ಸಾಮಾಜಿಕ ನೆರವಿನ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ಅಧ್ಯಕ್ಷತೆಯನ್ನು ಕುಲಾಲ ಸಂಘ (ರಿ) ಶಿವಪುರ ಇದರ ಅಧ್ಯಕ್ಷ ವಾಸುದೇವ ಕುಲಾಲ್ ವಹಿಸಿದ್ದರು. ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.), ಮಂಗಳೂರು, ಇದರ ಅಧ್ಯಕ್ಷ ಮಯೂರ್ ಉಳ್ಳಾಲ್, ವಿಜ್ಞಾನಿ ಡಾ| ಆನಂದ ಕುಲಾಲ್ ಪಟ್ಣ (ನಿರ್ದೇಶಕರು (ಪ್ರಭಾರ), ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರ, ಬೆಂಗಳೂರು), PWD ಕಾಂಟ್ರಾಕ್ಟರ್ ಕ್ಲಾಸ್ I, ಮತ್ತು ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ರಾಜೀವ್ ಕುಲಾಲ್, ಬೆಪ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಳು ಕುಲಾಲ್ (ಅಧ್ಯಕ್ಷರು, ಕುಲಾಲ್ ಸಂಘ (ರಿ) ಪೆರ್ಡೂರು), ಶ್ರೀ ಹರೀಶ್ಚಂದ್ರ ಕುಲಾಲ್ (ಅಧ್ಯಕ್ಷರು, ಕುಲಾಲ್ ಸುಧಾರಕ ಸಂಘ (ರಿ) ಕಾರ್ಕಳ), ಮತ್ತು ಸುರೇಂದ್ರ ಕುಲಾಲ್ (ಅಧ್ಯಕ್ಷರು, ಕುಲಾಲ್ ಸಂಘ (ರಿ) ಹೆಬ್ರಿ) ಕುಲಾಲ ಸಮಾಜದ ಹಿರಿಯರಾದ ಐತು ಕುಲಾಲ್ ಕನ್ಸಾನ, ಗೌರವ ಅಧ್ಯಕ್ಷರಾದ ಉದಯ ಕುಲಾಲ್, ಕಾರ್ಯದರ್ಶಿ ಮಣಿಕಂಠ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಸುನಂದಾ ಕುಲಾಲ್ ಉಪಸ್ಥಿತ ರಿದ್ದರು.

ಸಂಘದ ವಾರ್ಷಿಕ ಸಮಾವೇಶದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಶ್ರೀಮತಿ ಭಾಗಿ ಕುಲಾಲ್, ಮೂರ್ಸಾಲು, ಕಂಬಳ ಕ್ಷೇತ್ರ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ಮಂಜುನಾಥ್ ಕುಲಾಲ್, ಯಳಗೋಳಿ, ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ ಟಾಪರ್ ಆಗಿರುವ ಕು. ಸಮೃದ್ಧಿ ಸತೀಶ ಕುಲಾಲ್, ಗುಜ್ಜಿಬೆಟ್ಟು ,ಕ್ರೀಡಾ ಕ್ಷೇತ್ರದಲ್ಲಿನ ಸಾಧಕ, ಜೂನಿಯರ್ ನ್ಯಾಷನಲ್ ಕಬಡ್ಡಿ ಆಟಗಾರರಾದ ಸುಕೇಶ್ ಕುಲಾಲ್, ಮಾಳ ಬಜಗೋಳಿ ಅವರನ್ನು ಗೌರವಿಸಲಾಯಿತು.

ಮಯೂರ್ ಉಳ್ಳಾಲ್ ಅವರು ಮಾತನಾಡಿ ಕುಲಾಲ ಸಮುದಾಯವು ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಇನ್ನಷ್ಟು ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು ಎಂಬ ಕರೆ ನೀಡಿದರು. ಸಂಘಟನೆಯ ಮೂಲಕ ಸಮುದಾಯದ ಹಕ್ಕುಗಳನ್ನು ಪಡೆಯಲು ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಡಾ| ಆನಂದ ಕುಲಾಲ್ ಅವರು ಮಾತನಾಡಿ ಆರೋಗ್ಯವಂತ ಮನುಷ್ಯನಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಆರೋಗ್ಯ ರಕ್ಷಣೆಯ ಕಡೆಗೆ ಗಮನವನ್ನು ನೀಡಬೇಕು. ಔಷಧವಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಗನ್ನಾಥ ಕುಲಾಲ್ ಸ್ವಾಗತಿಸಿದರು. ಗಣೇಶ ಹಾಂಡ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅಧ್ಯಾಪಕ ಮಂಜುನಾಥ ಕುಲಾಲ್ ನಿರೂಪಿಸಿದರು. ಉಮೇಶ ಕುಲಾಲ್ ವಂದಿಸಿದರು.

ಸಂಘದ ವಾರ್ಷಿಕ ಮಹಾ ಸಮಾವೇಶದಲ್ಲಿ ಪ್ರಸಕ್ತ ವರ್ಷದ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮತ್ತು ಮುಂಬರುವ ಯೋಜನೆಗಳ ಕುರಿತು ಸಕಾಲಿಕ ಚರ್ಚೆಗಳು ನಡೆದವು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.ಶಿವಪುರ ಗ್ರಾಮದ ಅರ್ಹ ಫಲಾನುಭವಿಗಳಿಗೆ ಅಗತ್ಯ ವೈದ್ಯಕೀಯ ನೆರವನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವಾರು ಪ್ರಮುಖ ಗಣ್ಯರು ಆಗಮಿಸಿ ಮಾರ್ಗದರ್ಶನ ನೀಡಿದರು.

ಸಮಾರಂಭದ ನಂತರ, ಅತಿಥಿಗಳು ಮತ್ತು ಸಭಿಕರ ಮನರಂಜನೆಗಾಗಿ ಆಕರ್ಷಕವಾದ ಸಾಂಸ್ಕೃತಿಕ ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಯಶಸ್ಸಿಗಾಗಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಅತ್ಯಂತ ಶ್ರಮ ವಹಿಸಿದರು. ಜಿಲ್ಲಾ ಮತ್ತು ತಾಲೂಕು ಕುಲಾಲ ಸಮಾಜದ ಪ್ರಮುಖರ ಉಪಸ್ಥಿತಿಯು ಈ ಸಮಾವೇಶಕ್ಕೆ ಮತ್ತಷ್ಟು ಬಲ ನೀಡಿತು. ಎಲ್ಲಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Team Udayaprabha
";