| Latest Version 9.0.7 |

Crime News

ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ತಂದೆ

 

ಹುಬ್ಬಳ್ಳಿ : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಗರ್ಭಿಣಿ ಮಗಳನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ ಪ್ರೀತಿಸಿದ್ದರು. ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯ ಇದ್ದುದರಿಂದ ಡಿಗ್ರಿ ಓದುವಾಗ ಇನ್​ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಇದು ಗೊತ್ತಾಗಿ ಬೇರೆ ಬೇರೆ ಸಮಾಜದವರಾಗಿದ್ದರಿಂದ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು.
ಆದರೆ, ಯುವತಿ ಯಾವುದೇ ಕಾರಣಕ್ಕೂ ಪ್ರಿಯಕರನನ್ನು ಬಿಟ್ಟು ಬದುಕುವುದಿಲ್ಲ ಎಂದು ಯುವತಿ ಹಠ ಹಿಡಿದಿದ್ದಳಂತೆ. ಧಾರವಾಡದಲ್ಲಿ ಕೋಚಿಂಗ್‍ಗೆ ಹೋಗಿದ್ದ ವಿವೇಕಾನಂದ ಬಳಿ ಹೋಗಿ ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಳಂತೆ. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಎನ್ನಲಾಗಿದೆ.
ರಾಜಿ ಸಂಧಾನ ಮಾಡಿದ್ದ ಪೊಲೀಸರು
ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯ್ತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಿರಬಹುದು ಎಂದುಕೊಂಡು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಬಂದಿದ್ದರು. ಆದರೆ, ಮತ್ತೆ ಜಗಳ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ, ರಾಜಿ ಸಂಧಾನ ಮಾಡಿಸಿದ್ದರು ಎನ್ನಲಾಗಿದೆ. ಆದರೂ ಈ ಕೃತ್ಯ ನಡೆದುಹೋಗಿದೆ.
ಭಾನುವಾರ ಸಂಜೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ ಮತ್ತು ಇತರರು ಮಾನ್ಯಾ ಮತ್ತು ಆಕೆಯ ಅತ್ತೆ ಸೇರಿದಂತೆ ಮೂ‌ವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಮಾರಕಾಸ್ತ್ರಗಳಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡವಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಹುಡುಗನ ತಾಯಿ ಸೇರಿ ಮೂವರು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನ್ಯ ಜಾತಿ ಯುವಕನ ಮದುವೆಯಾದ ಗರ್ಭಿಣಿ ಕೊಂದ ಪಾಲಕರು: 18 ಮಂದಿ ವಿರುದ್ಧ ಪ್ರಕರಣ:
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದ ಗರ್ಭಿಣಿ ಮಾನ್ಯಾ ಕೊಲೆಗೆ ಸಂಬಂಧಿಸಿ, 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಮಾನ್ಯಾ ಅವರ ಪತಿ ವಿವೇಕಾನಂದ ದೊಡ್ಡಮನಿ ಅವರು, ಮಾನ್ಯಾ ಅವರ ತಂದೆ ಪ್ರಕಾಶಗೌಡ ಪಾಟೀಲ ಹಾಗೂ ಅವರ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ನಾಲ್ಕನೇ ಆರೋಪಿ ಮಾತ್ರ ಕಲಘಟಗಿಯ ದಾಸ್ತಿಕೊಪ್ಪದವರಾಗಿದ್ದು, ಉಳಿದವರೆಲ್ಲ ಇನಾಂ ವೀರಾಪುರದವರಾಗಿದ್ದಾರೆ. ಅಲ್ಲದೆ, ಪ್ರಕರಣಲ್ಲಿ 10 ಮಂದಿ ಗಾಯಗೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಗಲಭೆ, ಕಾನೂನು ಬಾಹಿರವಾಗಿ ಗುಂಪುಗೂಡುವುದು, ಮಾರಕಾಸ್ತ್ರದಿಂದ ಹಲ್ಲೆ, ಕೊಲೆ, ಕೊಲೆ ಯತ್ನ, ಉದ್ದೇಶಪೂರ್ವಕ ದುಷ್ಕೃತ್ಯ, ಅಕ್ರಮ ಪ್ರವೇಶ, ಶಾಂತಿ ಕದಡುವ ಯತ್ನ, ಜೀವ ಬೆದರಿಕೆ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?:
ಮಾನ್ಯಾ ಪಾಟೀಲ ಅವರನ್ನು, ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ದೊಡ್ಡಮನಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಮಾನ್ಯಾ ಕುಟುಂಬದವರು ಕೋಪಗೊಂಡಿದ್ದರು. ಭಾನುವಾರ ಸಂಜೆ 5ರ ಸುಮಾರಿಗೆ ಇನಾಂ ವೀರಾಪುರ ಗ್ರಾಮದ ಹೊರವಲಯದ ಗಿರಿಯಾಲ ರಸ್ತೆಯಲ್ಲಿ, ವಿವೇಕಾನಂದ ಅವರ ತಂದೆ ಮರಿಯಪ್ಪ, ಮಾವ ಸುನೀಲ ಅವರು ಬೈಕ್‌ ಮೇಲೆ ತೆರಳುತ್ತಿದ್ದಾಗ, ಟ್ರ್ಯಾಕ್ಟರ್ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ್ದರು.

ವಿಷಯ ತಿಳಿದು ವಿವೇಕಾನಂದ ಅವರು ಸ್ಥಳಕ್ಕೆ ಹೋದಾಗ ಅವರ ಮೇಲೆ‌, ಪ್ರಕಾಶಗೌಡ ಪಾಟೀಲ ಮತ್ತು ಆಕಾಶಗೌಡ ಪಾಟೀಲ ರಾಡ್ ಹಾಗೂ ಸ್ಪ್ರಿಂಕ್ಲರ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲ ಗುಂಪುಗೂಡಿ, ವಿವೇಕಾನಂದ ಅವರ ಮನೆಗೆ ಹೋಗಿ ಅವಾಚ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ.

ಮನೆಯೊಳಗೆ‌ ಅಕ್ರಮವಾಗಿ ಪ್ರವೇಶಿಸಿ ಸಿಸಿಟಿವಿ ಕ್ಯಾಮರಾ ಕಿತ್ತಿದ್ದಾರೆ. ನಂತರ ವಿವೇಕಾನಂದ ಅವರ ತಾಯಿ ರೇಣುಕಾ ಹಾಗೂ ಪತ್ನಿ ಮಾನ್ಯಾ ಅವರ ಮೇಲೆ ಕೊಡ್ಲಿ, ರಾಡ್, ಸ್ಪ್ರಿಂಕ್ಲರ್‌ನಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಲು ಮುಂದಾದ ಯಲ್ಲಪ್ಪ ದೊಡ್ಡಮನಿ, ಸಂಗೀತಾ ದೊಡ್ಡಮನಿ, ಉವಮ್ಮಾ ದೊಡ್ಡಮನಿ, ಅನನ್ಯಾ ದೊಡ್ಡಮನಿ ಅವರಿಗೆ ಜೀವ ಬೆದರಿಕೆ ಹಾಕಿ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 9.15 ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೆಎಂಸಿ-ಆರ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಮಾನ್ಯಾ ಅವರ ದೇಹ ಇಡಲಾಗಿದೆ. ಧಾರವಾಡ ಎಸ್ಪಿ ಗುಂಜನ್ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೇದಾರ, ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಶವಾಗಾರಕ್ಕೆ ಭೇಟಿ ನೀಡಿದ್ದು, ಶವಪರೀಕ್ಷೆ ಹಾಗೂ ಅಂತ್ಯಕ್ರಿಯೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವಿಧ ದಲಿತ ಸಂಘಟನೆಯ ಪದಾಧಿಕಾರಿಗಳು ಸಹ ಶವಾಗಾರದ ಬಳಿ ಬೀಡಿಬಿಟ್ಟಿದ್ದಾರೆ.‌

ಮುಂಜಾಗ್ರತಾ ಕ್ರಮವಾಗಿ ಶವಾಗಾರದ ಬಳಿ ಹಾಗೂ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Team Udayaprabha
";