| Latest Version 9.0.7 |

Crime News

ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

 


ಬೆಳಗಾವಿ: ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಅಕ್ಷಯ ಯಲ್ಲಪ್ಪ ರಾವಳೆ (26) ಶಿಕ್ಷೆಗೆ ಗುರಿಯಾದವ. 2022ರ ಜನವರಿ 28ರಂದು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ, ಸರ್ಕಾರಿ ಆಸ್ಪತ್ರೆಯ ಕಟ್ಟಡದ ಕೋಣೆಯೊಂದರಲ್ಲಿ ಬಾಲಕಿಯ ಟಿಷರ್ಟ್‌ ಹರಿದು ವಿಡಿಯೊ ಮಾಡಿಕೊಂಡಿದ್ದ. ಲೈಂಗಿಕ ದೌರ್ಜನ್ಯ ನಡೆಸಿ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದ. ಈ ಬಗ್ಗೆ ಬಾಲಕಿಯ ಪಾಲಕರು ದೂರು ದಾಖಲಿಸಿದ್ದಾರು.

ತನಿಖಾಧಿಕಾರಿ ಆಗಿದ್ದ ಮಹಾಂತೇಶ ಹೊಸಪೇಟ, ಡಿ.ಎಸ್‌. ಉಳ್ಳಾಗಡ್ಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು 6 ಸಾಕ್ಷಿಗಳ ವಿಚಾರಣೆ ನಡೆಸಿ, 54 ದಾಖಲೆಗಳನ್ನು ಪರಿಶೀಲಿಸಿ ಶಿಕ್ಷೆ ವಿಧಿಸಿದ್ದಾರೆ.

ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.

Team Udayaprabha
";