| Latest Version 9.0.7 |

Crime News

ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

 

ಉಳ್ಳಾಲ (ದಕ್ಷಿಣ ಕನ್ನಡ): ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಉಳ್ಳಾಲ ಸಮೀಪದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಮೃತನನ್ನು ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (46) ಯಾನೆ “ಟ್ಯಾಬ್ಲೆಟ್ ಆರೀಫ್” ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಆರೀಫ್, ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬುಲೆಟ್ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ಥಳದಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಹಳೆಯ ವೈಷಮ್ಯವೇ ಕಾರಣ? : ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 2022ರ ಮೇ ತಿಂಗಳಲ್ಲಿ ಕೂಡ ಆರೀಫ್ ಮೇಲೆ ಇದೇ ರೀತಿಯಲ್ಲಿ ದಾಳಿ ನಡೆದಿದ್ದು, ಬಜಾಲ್ ಮೂಲದ ಟೊಪ್ಪಿ ನೌಫಾಲ್ ತಂಡ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿತ್ತು. ಆ ಪ್ರಕರಣದ ಮುಂದುವರಿದ ಪರಿಣಾಮವೇ ಈ ಹತ್ಯೆ ಆಗಿರಬಹುದು ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿವಾಹಿತನಾಗಿದ್ದ ಆರೀಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು, ಕಳೆದ ಏಳು ವರ್ಷಗಳಿಂದ ಕುಟುಂಬ ಸಮೇತ ಮುಳ್ಳುಗುಡ್ಡೆ ಪ್ರದೇಶದಲ್ಲಿ ವಾಸವಾಗಿದ್ದರು. ಅವರ ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

ಪೊಲೀಸ್ ತನಿಖೆ ಚುರುಕು : ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್ ಹಾಗೂ ಸೋಕೋ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Team Udayaprabha
";