| Latest Version 9.0.7 |

Crime News

ಕುಡಿಯಲು ಹಣಕ್ಕೆ ಪೀಡಿಸುತ್ತಿದ್ದ ಮಗನನ್ನು ಕೊಂದ ತಾಯಿ

 

 

ಮೈಸೂರು: ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ

ಎರಡನೇ ಮಗನನ್ನು ಚಾಮುಂಡಿ ಬೆಟ್ಟ ರಸ್ತೆಯ ತಾವರೆ ಕಟ್ಟೆಯ ಬಳಿ ಕರೆತಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

ನಗರದ ಕೆಸರೆಯ ಕುರಿಮಂಡಿ ನಿವಾಸಿ ಮಂಜುಳಾ (60) ಬಂಧಿತ ಆರೋಪಿ. ರಮೇಶ್(45) ಕೊಲೆಯಾದವರು. ತಾವರೆ ಕಟ್ಟೆಯ ಬಳಿ ಏ.14ರಂದು ಬೆಳಿಗ್ಗೆ ಅಪರಿಚಿತ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಜರ್‌ಬಾದ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಎಂ.ಮಹದೇವಸ್ವಾಮಿ ನೇತೃತ್ವದ ತಂಡವು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಮೂಲಕ ಆರೋಪಿಯ ಚಲನ ವಲನ ಗಮನಿಸಿ ಗುರುವಾರ ಬಂಧಿಸಿದರು.

 

‘ಆರೋಪಿಯ ಪತಿ ನಿಧನರಾಗಿದ್ದು, ತಾಯಿ ಹಾಗೂ ಅವಿವಾಹಿತ ಮಗ ಒಟ್ಟಿಗೇ ವಾಸಿಸುತ್ತಿದ್ದರು. ಮಹಿಳೆಯು ಜೀವನೋಪಾಯಕ್ಕೆ ಮನೆಕೆಲಸವನ್ನು ನೆಚ್ಚಿಕೊಂಡಿದ್ದರು. ಮದ್ಯವ್ಯಸನಿಯಾಗಿದ್ದ ಮಗ ಏ.13ರ ರಾತ್ರಿ ಹಣ ಕೊಡುವಂತೆ ಜಗಳವಾಡಿ ಹಿಂಸೆ ನೀಡಿದ್ದ. ಅದರಿಂದ ಬೇಸತ್ತ ಆಕೆ, ಏ.14ರಂದು ಬೆಳಿಗ್ಗೆ 8.30ರ ವೇಳೆ ರಿಕ್ಷಾದಲ್ಲಿ ಆತನನ್ನು ಕರೆತಂದು ದೊಣ್ಣೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಕೊಂದರೆಂದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 

ನಗರದ ವಿವಿಧೆಡೆ 200 ಸಿಸಿಟಿವಿ ಕ್ಯಾಮೆರಾಗಳಲ್ಲಿ ಇಬ್ಬರ ಚಲನವಲನ ಗಮನಿಸಿದ ಬಳಿಕ ಆಕೆಯನ್ನು ಸೆರೆಹಿಡಿಯಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಸೀಮಾ ಲಾಟ್ಕರ್ ತಿಳಿಸಿದರು.

Team Udayaprabha
";