ಮೂಡಲಗಿ: ತಂದೆ-ತಾಯಿಯ ಸೇವೆ ಮಾಡಿದರೆ ಗುರುವಿನ ಸೇವೆ ಮಾಡಿದಂತೆ. ತಂದೆ-ತಾಯಿಯೇ ನಮ್ಮ ಮೊದಲ ಗುರುಗಳಾಗಿದ್ದು, ಅವರ ಆಶೀರ್ವಾದವೇ ನಮ್ಮ ಬದುಕಿನ ನಿಜವಾದ ಸಂಪತ್ತು ಎಂದು ಚಿಕ್ಕೋಡಿ ಡಿಡಿಪಿಐ ಅಜೀತ ಮನ್ನಿಕೇರಿ ಹೇಳಿದರು.
ಪಟ್ಟಣದ ಪಂಡಿತ ಜವಾಹರಲಾಲ್ ನೆಹರು ಪ್ರೌಢಶಾಲೆಯ 1991-92ನೇ ಸಾಲಿನ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮಕ್ಕೆ ಭಾನುವಾರ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಹಿರಿಯರು ಹಾಕಿಕೊಟ್ಟ ಸಂಸ್ಕಾರ ಮತ್ತು ಮಾರ್ಗದರ್ಶನವನ್ನು ಇಂದಿನ ಯುವಜನತೆ ಪಾಲಿಸುವುದು ಅತ್ಯವಶ್ಯಕವಾಗಿದೆ. ಇಂದಿನ ದಿನಗಳಲ್ಲಿ ತಂದೆ-ತಾಯಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮುಂದಿನ ಪೀಳಿಗೆಯ ಯುವಕರಿಗೆ ಗುರುಗಳ ಹಾಗೂ ತಂದೆ-ತಾಯಿಯ ಸೇವೆಯ ಮಹತ್ವವನ್ನು ತಿಳಿಸಿಕೊಡಬೇಕು. ತಂದೆ-ತಾಯಿಯ ಸೇವೆ, ಗೌರವ ಮತ್ತು ಆಶೀರ್ವಾದಕ್ಕೆ ಜೀವನದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಹಿರೇಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಸಿಇಒ ಚಿದಾನಂದ ಮುಗಳಖೋಡ ಅವರು ಗುರುವಿನ ಮಹತ್ವ ಹಾಗೂ ತಂದೆ-ತಾಯಿಯ ಗೌರವದ ಕುರಿತು ಮಾತನಾಡಿದರು.
ಸಂಘಟಕ ಹಾಗೂ ಹಳೆಯ ವಿದ್ಯಾರ್ಥಿ ಜಗದೀಶ ಗೊರಗುದ್ದಿ ಮಾತನಾಡಿ, ಜೀವನದಲ್ಲಿ ವಿದ್ಯೆ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಕಲಿಸಿಕೊಟ್ಟ ಗುರುಗಳನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ನಿವೃತ್ತ ಶಿಕ್ಷಕರಾದ ಆರ್.ಎಂ. ಶಿಂಗಾಡಿ, ಸಿ.ಎಂ. ಕಟಗಿ, ಬಿ.ಎ. ಕಮತ, ಎಸ್.ಎಸ್. ಅಂಗಡಿ, ಪಿ.ಆರ್. ಗರಗಟ್ಟಿ, ದಯಾನಂದ ಗಿರಡ್ಡಿ ಹಾಗೂ ವ್ಹಿ.ಜಿ. ವಿರಕ್ತಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಮಹಾದೇವಿ ಹುಕ್ಕೇರಿ, ಉಮೇಶ ಹೆಬ್ಬಾಳ, ಮಲ್ಲಿಕಾರ್ಜುನ ಕುರಬೇಟ, ಹಣಮಂತ ಕಲಕುಟ್ರಿ, ಪರಪ್ಪ ವ್ಯಾಪಾರಿ, ಯಮನಪ್ಪ ಗದಾಡಿ, ಪುಂಡಲೀಕ ಕೊಡ್ಲಿ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಕಾಶ ಇಟ್ಟಣಗಿ ಸ್ವಾಗತಿಸಿದರು. ಗಣಪತಿ ಭೂತಪ್ಪಗೊಳ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.


,


















