ಸವದತ್ತಿ:
“ರಾಜ್ಯದ ದೇವಸ್ಥಾನಗಳಲ್ಲಿರುವ ಚಿನ್ನ ಮತ್ತು ಆಭರಣಗಳನ್ನು ಲೆಕ್ಕಪತ್ರದೊಂದಿಗೆ ಸಂರಕ್ಷಿಸಿ, ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ”
ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
“ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿರುವ ಸುಮಾರು 42 ಕೆಜಿ ಚಿನ್ನವನ್ನು ದೇವಿಯ ಅಲಂಕಾರಕ್ಕೆ ಬಳಸುವ ಮೂಲಕ ಭಕ್ತರಿಗೆ ದೇವಿಯ ದರ್ಶನವನ್ನು ಮತ್ತಷ್ಟು ಆಕರ್ಷಕಗೊಳಿಸುವಂತೆ ಮುಜರಾಯಿ ಸಚಿವರಿಗೆ ಸೂಚನೆ ನೀಡಿದ್ದೇನೆ” ಎಂದರು.
“ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿರುವ ಚಿನ್ನದ ಲೆಕ್ಕವನ್ನು ಸರಿಯಾಗಿ ಇಡಬೇಕು. ಅವನ್ನು ಪೆಟ್ಟಿಗೆಯಲ್ಲಿ ಇಟ್ಟು ಯಾರೋ ತೆಗೆದುಕೊಂಡು ಹೋದರು ಎಂಬ ಆತಂಕಕ್ಕೆ ಅವಕಾಶ ನೀಡಬಾರದು. ದೇವರ ಆಭರಣಗಳು ದೇವರ ಅಲಂಕಾರಕ್ಕೆ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ವಿಶೇಷ ಯೋಜನೆ ರೂಪಿಸಲು ಮುಂದಡಿ ಇಟ್ಟಿದ್ದೇವೆ. ಶ್ರೀ ಕ್ಷೇತ್ರ
ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ ₹215 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ” ಎಂದರು.
“ಉದೋ ಉದೋ ಎಲ್ಲಮ್ಮ, ಉದೋ ತಾಯಿ ಎಲ್ಲಮ್ಮ” ಎಂದು ಭಕ್ತಿಭಾವದಿಂದ ಭಂಡಾರದ ಒಡತಿ ಸವದತ್ತಿ ಯಲ್ಲಮ್ಮನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ತಾಯಿಯ ಸನ್ನಿಧಿಯಲ್ಲಿ ಜ್ಯೋತಿ ಬೆಳಗಿಸಿ, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಬಹಳ ಸಂತೋಷ ತಂದಿದೆ” ಎಂದು ಹೇಳಿದರು.
“ಎಲ್ಲರನ್ನೂ ಸಾಕಿ, ಸಲಹಿ, ಕಾಪಾಡುವ ತಾಯಿ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ನಾವೆಲ್ಲರೂ ಒಂದಾಗಿ ಸೇರಿದ್ದೇವೆ. ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ” ಎಂದರು.
“ಯಲ್ಲಮ್ಮ ಎಂದರೆ ಕಷ್ಟಗಳನ್ನು ದೂರ ಮಾಡುವ, ದುಃಖ ನಿವಾರಿಸುವ ತಾಯಿ. ದುರ್ಗಾದೇವಿಯ ಸ್ವರೂಪವಾಗಿರುವ ಯಲ್ಲಮ್ಮ ಎಲ್ಲ ವರ್ಗದ ಜನರಿಗೂ ರಕ್ಷಣೆ ನೀಡುವ ದೇವತೆ ಎಂಬ ನಂಬಿಕೆ ಭಕ್ತರಲ್ಲಿದೆ. ನಾನೂ ಕಷ್ಟದ ಸಂದರ್ಭಗಳಲ್ಲಿ ಇಲ್ಲಿಗೆ ಬಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ನನ್ನ ಕುಟುಂಬದವರೂ ನನಗೆ ತಿಳಿಯದಂತೆ ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ಸಾಕಷ್ಟು ದೂರದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ ಎಂದರೆ ತಾಯಿ ಯಲ್ಲಮ್ಮ ಜನರ ಮನಸ್ಸಿನಲ್ಲಿ ಎಷ್ಟು ಆಳವಾಗಿ ನೆಲೆಸಿದ್ದಾಳೆ ಎಂಬುದು ಗೊತ್ತಾಗುತ್ತದೆ” ಎಂದು ಬಣ್ಣಿಸಿದರು.
“ಧರ್ಮ ಮತ್ತು ನಂಬಿಕೆ ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳಾಗಿವೆ. ಮನುಷ್ಯನ ಬದುಕಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಂಸ್ಕೃತಿಯಲ್ಲಿ ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ಗ್ರಾಮಗಳಿಗೆ ಹೋದಾಗಲೂ ಮೊದಲು ಗ್ರಾಮ ದೇವತೆಯ ಬಗ್ಗೆ ವಿಚಾರಿಸುತ್ತೇವೆ. ಮಹಿಳೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಗೌರವವಿದೆ. ಆಹ್ವಾನ ಪತ್ರಿಕೆ ಕೊಡಬೇಕಾದರು ಮೊದಲು ಶ್ರೀಮತಿ ಎಂದು ಬರೆದು ನಂತರ ಶ್ರೀ ಎಂದು ಬರೆಯುವುದು ನಮ್ಮಸಂಪ್ರದಾಯ.
ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಪರಸ್ಪರ ಸಾಮರಸ್ಯದಿಂದ ಬದುಕಬೇಕು” ಎಂದರು.
“ಸರ್ಕಾರವೂ ದೇವರ ಮನೆಯಿದ್ದಂತೆ. ದೇವಸ್ಥಾನಕ್ಕೆ ಹೋಗಿ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಬೇಡುವಂತೆ, ಸರ್ಕಾರದ ಕಚೇರಿಗಳಿಗೂ ಜನರು ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿಯೇ ವಿಧಾನಸೌಧದ ಮೇಲೆ ಕೆಂಗಲ್ ಹನುಮಂತಯ್ಯ ಅವರು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿದ್ದಾರೆ. ನಮ್ಮಸರ್ಕಾರ ಪ್ರಜಾಸೇವಾ ಇಲಾಖೆ ಸ್ಥಾಪಿಸಿ ಆಡಳಿತಯಂತ್ರವನ್ನು ಮನೆಯ ಬಾಗಿಲಿಗೆ ತಲುಪಿಸುತ್ತಿದ್ದೇವೆ” ಎಂದರು.
“ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಸಚಿವ ಎಚ್.ಕೆ. ಪಾಟೀಲ್ ಅವರು ಇತಿಹಾಸ ಪುಟ ಸೇರಿದ್ದಾರೆ
ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರ ರಚಿಸಿ, ಮುಂದಿನ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದಾರೆ ಎಂದು ಅಭಿನಂದಿಸಿದರು.
ದೇವಸ್ಥಾನದಲ್ಲಿ ದಾಸೋಹ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ” ಎಂದರು.
“ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ರೈತರ ಬದುಕು ಹಸನಾಗಬೇಕು, ಕೃಷಿಗೆ ನೀರು ಸಿಗಬೇಕು ಎಂಬ ಉದ್ದೇಶದಿಂದ ಕೆರೆ ತುಂಬಿಸುವ ಯೋಜನೆಗಳು ಹಾಗೂ ಏತ ನೀರಾವರಿ ಯೋಜನೆಗಳಿಗೆ ಒತ್ತು ನೀಡಬೇಕಿದೆ. ಶಾಸಕರಾದ ವಿಶ್ವಾಸ ವಸಂತ ವೈದ್ಯ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
”ಸವದತ್ತಿ ಪುರಸಭೆಯನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಸುಮಾರು ₹43 ಕೋಟಿ ಅನುದಾನ ನೀಡಲಾಗಿದೆ. ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಜನರ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪ್ರಜಾಸೇವೆ ಕಾರ್ಯಕ್ರಮ ರೂಪಿಸಲಾಗಿದೆ. ಕಂದಾಯ ಇಲಾಖೆ, ನಗರಸಭೆ, ಪುರಸಭೆ ಹಾಗೂ ಪಂಚಾಯಿತಿಗಳಿಗೆ ಸಂಬಂಧಿಸಿದ ಭೂಮಿ ಮತ್ತು ಆಸ್ತಿ ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸಿ, ಜನರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ‘ಭೂ ಗ್ಯಾರಂಟಿ’ ನೀಡಿದ್ದೇವೆ” ಎಂದು ತಿಳಿಸಿದರು.
“ರೈತರ ಬದುಕು ಹಸನಾಗಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶ. ರೈತರಿಗೆ ನಿಗದಿತ ಸಂಬಳವಿಲ್ಲ, ಬಡ್ತಿಯಿಲ್ಲ, ಪಿಂಚಣಿಯಿಲ್ಲ, ನಿವೃತ್ತಿಯೂ ಇಲ್ಲ. ಇಂತಹ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು. ಕೆರೆ ತುಂಬಿಸುವುದು ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವುದು ಅತ್ಯಂತ ಮುಖ್ಯವಾಗಿದೆ” ಎಂದು ಹೇಳಿದರು.
“ಬಡ ರೈತರು ಕೃಷಿ ಚಟುವಟಿಕೆ ನಡೆಸಲು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಮುಂದಿನ ವರ್ಷದಿಂದ ‘ನೇಗಿಲಯೋಗಿ’ ಕಾರ್ಯಕ್ರಮ ಜಾರಿಗೊಳಿಸುವ ಉದ್ದೇಶವಿದೆ.
ಮೂರು ಎಕರೆ ಒಳಗಿನ ಜಮೀನು ಹೊಂದಿರುವ ಬಡ ರೈತರ ಭೂಮಿಯನ್ನು ಸರ್ಕಾರದ ವತಿಯಿಂದ ಟ್ರ್ಯಾಕ್ಟರ್ಗಳ ಮೂಲಕ ಉಳುಮೆ ಮಾಡಿಕೊಡುವ ಯೋಜನೆ ರೂಪಿಸಲಾಗುತ್ತಿದೆ. ಕೃಷಿಗೆ ಅಗತ್ಯವಾದ ಸೌಲಭ್ಯಗಳ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಈ ಯೋಜನೆ ನೆರವಾಗಲಿದೆ” ಎಂದು ತಿಳಿಸಿದರು.
“ಸವದತ್ತಿ ಕ್ಷೇತ್ರದಲ್ಲಿ ಸುಮಾರು ₹500 ಕೋಟಿಗೂ ಅಧಿಕ ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿ ಚಾಲ್ತಿಯಲ್ಲಿದೆ. ರೈತರಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಬೇಡಿಕೆಗಳನ್ನೂ ಪರಿಶೀಲಿಸಲಾಗುವುದು” ಎಂದರು.
ರಾಜ್ಯದ ಯುವಕರ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು, ನಾಯಕತ್ವ ಗುಣ ಬೆಳೆಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗುತ್ತಿದೆ. ರಾಜ್ಯಾದ್ಯಂತ 10 ಸಾವಿರ ಯುವ ಸಂಘಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.
“ಅಧಿಕಾರಕ್ಕೆ ಬಂದ ತಕ್ಷಣ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಭರವಸೆಗಳನ್ನು ಈಡೇರಿಸಿದ್ದೇವೆ. ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇವೆ. ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ನಮ್ಮ ಸರ್ಕಾರದ ಬದ್ಧತೆ” ಎಂದು ಹೇಳಿದರು.
“ಸವದತ್ತಿ ಕ್ಷೇತ್ರಕ್ಕೆ ಮತ್ತೊಂದು ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕೆಂಬ ಶಾಸಕರ ಬೇಡಿಕೆ ಸಲ್ಲಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಧ್ಯತೆಗಳನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.


,


















