| Latest Version 9.0.7 |

Local News

ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ : ಕನ್ನಡ ಸಂಘಟನೆಗಳ ಸ್ವಾಗತ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ “ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ” ಎಂದು ಮರುನಾಮಕರಣ ಮಾಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಘೋಷಣೆಯನ್ನು ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆ ಸ್ವಾಗತಿಸಿದೆ.

ಮುಖ್ಯಮಂತ್ರಿಗಳ ಘೋಷಣೆಗೆ ಕಾರಣಿಭೂತರಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನಮಣ್ಣವರ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ವೇದಿಕೆಯು ಅಭಿನಂದಿಸಿದೆ.

ಸಾರಿಗೆ ಸಂಸ್ಥೆಯ ಮರುನಾಮಕರಣಕ್ಕಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ೨೦೨೪ ರಲ್ಲಿ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರಿಗೆ ಮನವಿ ಸಲ್ಲಿಸಿದ್ದವು.

ನಂತರ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಮರುನಾಮಕರಣದ ನಿರ್ಧಾರ ಕೈಕೊಂಡು ಸರಕಾರಕ್ಕೆ ಪ್ರಸ್ತಾನೆಯನ್ನು ಸಲ್ಲಿಸಲಾಗಿತ್ತು. ಮರುನಾಮಕರಣಕ್ಕಾಗಿ ೮ ಕೋ.ರೂ.ಗಳ ವೆಚ್ಚವಾಗುವದೆಂದು ಸರಕಾರಕ್ಕೆ ತಿಳಿಸಲಾಗಿತ್ತು. ಬೆಳಗಾವಿ ವಿಭಾಗದ ೭ ಜಿಲ್ಲೆಗಳಲ್ಲಿ ಸಾವಿರಾರು ಬಸ್ಸುಗಳ ಮೇಲೆ ಮರುನಾಮಕರಣದಂತೆ ಹೆಸರು ಬದಲಾಯಿಸುವದು, ಬಸ್ ನಿಲ್ಧಾಣಗಳು ಹಾಗೂ ಬಸ್ ಸೆಲ್ಟರ್‌ಗಳ ಮೇಲೆ ಹೊಸ ಹೆಸರಗಳನ್ನು ಬರೆಸುವುದು ಸೇರಿದಂತೆ ಎಲ್ಲ ವೆಚ್ಚಗಳು ೮ ಕೋ.ರು.ಗಳ. ಪ್ರಸ್ತಾವನೆಯಲ್ಲಿ ಸೇರಿವೆ.

ಸುನೀಲ ಹನಮಣ್ಣವರ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಅವರ ಪ್ರಯತ್ನದಿಂದಾಗಿ ಮರುನಾಮಕರಣದ ಘೋಷಣೆಯನ್ನು ಮುಖ್ಯಮಂತ್ರಿಗಳು ಅಕ್ಟೋಬರ್ ೨೫ ರಂದು ಕಿತ್ತೂರಿನಲ್ಲಿ ಮಾಡಿದ್ದಾರೆ.

ಮರುನಾಮಕರಣ ಸಮಾರಂಭವನ್ನು ನವೆಂಬರ್ ಅಂತ್ಯದಲ್ಲಿ ಬೆಳಗಾವಿಯಲ್ಲಿಯೇ ಆಯೋಜಿಸಬೇಕೆಂದು ಕನ್ನಡ ಪರ ಸಂಘಟನೆಗಳು ಸುನೀಲ ಹನಮಣ್ಣವರ ಅವರನ್ನು ಆಗ್ರಹಿಸಿವೆ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ , ಶಿವರೆಡ್ಡಿ ಹುಚರೆಡ್ಡಿ, ಮಲ್ಲಪ್ಪ ಗುಡಗೇನಟ್ಟಿ, ಬಾಳಪ್ಪ ಗುಡಗೇನಟ್ಟಿ, ಸಾಗರ ಬೋರಗಲ್ಲ, ಸ್ಮಿತಾ ಪೂಜಾರಿ, ರೇಖಾ ಲಕ್ಕುಂಡಿ, ವಂದನಾ ಹೊರಕೇರಿ ಮುಂತಾದವರು ತಿಳಿಸಿದ್ದಾರೆ.

Team Udayaprabha
";