ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಕಳೆದುಹೋಗುವ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿಇಐಆರ್ (CEIR) ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಂಡಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಅಥಣಿ ವಿಭಾಗದ ಡಿವೈಎಸ್‌ಪಿ ಪ್ರಶಾಂತ ಜಿ. ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಹಾಗೂ ಅಥಣಿ ವೃತ್ತದ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.
ತಂಡದಲ್ಲಿ ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಜಿ.ಎಸ್.ಉಪ್ಪಾರ ಹಾಗೂ ಪಿಎಸ್‌ಐ (ಅಪರಾಧ) ಮಲ್ಲಿಕಾರ್ಜುನ ತಳವಾರ ಪ್ರಮುಖ ಪಾತ್ರವಹಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಕಳೆದುಹೋದ ಮೊಬೈಲ್‌ಗಳನ್ನು ಹಂತ ಹಂತವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.
ಅದರಂತೆ, ಈ ಬಾರಿ 57 ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ, ಶುಕ್ರವಾರ ಆ 7ರಂದು ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಇನ್ನೂ ಪತ್ತೆಯಾಗಬೇಕಿರುವ ಕಳೆದುಹೋದ ಮೊಬೈಲ್‌ಗಳನ್ನು ಶೋಧಿಸುವ ಕಾರ್ಯ ನಿರಂತರವಾಗಿ ಮುಂದುವರಿದಿದ್ದು, ಸಾರ್ವಜನಿಕರು ಮೊಬೈಲ್ ಕಳೆದುಹೋದ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಿಇಐಆರ್ ಪೋರ್ಟಲ್ ಮೂಲಕ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


,


















