ಬೆಳಗಾವಿ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಹತ್ಯೆ ಮಾಡಿ, ಹೊಲದಲ್ಲಿ ಮುಚ್ಚಿ ಹಾಕಿ, ಪತಿ ಕಾಣೆಯಾಗಿದ್ದಾನೆ ಎಂದು ಕಥೆ ಕಟ್ಟಿ ದೂರು ನೀಡಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಆರು ತಿಂಗಳ ನಂತರ ಖೆಡ್ಡಾಕ್ಕೆ ಬೀಳಿಸುವಲ್ಲಿ ಚಿಕ್ಕೋಡಿ ತಾಲೂಕಿನ ಖಡಕಲಾಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತರನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಪ್ರಕರಣದ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಗಾರಿ ಗಾವಡೆಗೆ ರಾಮಾ ರಾಣಗೆ ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಈ ಸಂಬಂಧಕ್ಕೆ ಪತಿ ರಾಘು ಗಾವಡೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು.
ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡುತ್ತಿದ್ದ ಮೃತ ರಾಘು ಅವರನ್ನು ಹೊಲಕ್ಕೆ ಕರೆಸಿಕೊಂಡು, ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ಬಳಿಕ ಶವವನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಪತಿ ಕುರಿ ಕಾಯಲು ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಪತ್ನಿ ಕುಟುಂಬಸ್ಥರನ್ನು ನಂಬಿಸಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಆರಂಭದಲ್ಲಿ ನಾಪತ್ತೆ ಪ್ರಕರಣದಂತೆ ದಾಖಲಾಗಿತ್ತು.
ಮೃತ ರಾಘು ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಖಡಕಲಾಟ ಪೊಲೀಸರು, ಪ್ರಕರಣದ ಅಸಲಿ ಸತ್ಯವನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಪತ್ನಿ ಬಂಗಾರಿ ಸತ್ಯ ಬಾಯಿಬಿಟ್ಟಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಖಡಕಲಾಟದಲ್ಲಿ ರಾಘು ಸಿದ್ದಪ್ಪ ಗಾವಡೆ ಹತ್ಯೆ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.


,


















