ಉಡುಪಿ : ಕುಂದಾಪುರದಿಂದ ಹೆಜಮಾಡಿವರೆಗೆ ಮತ್ತು ಹೆಜಮಾಡಿಯಿಂದ ಕೇರಳದ ಗಡಿವರೆಗಿನ ಎನ್.ಹೆಚ್ 66 ರಸ್ತೆಯು ಡಿಪಿಆರ್ ಸಿದ್ದಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹಾ ಸಂಸ್ಥೆಯೊಂದನ್ನು ಈಗಾಗಲೇ ನೇಮಿಸಿದೆ. ಮೇ 14, 2026 ರಿಂದ ಡಿಪಿಆರ್ ಸಂಸ್ಥೆ ಯೋಜನಾ ವರದಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಕುಂದಾಪುರದಿಂದ ಪ್ರಾರಂಭವಾಗಿ ಹೆಜಮಾಡಿವರೆಗಿನ ಸಂಚಾರದಟ್ಟಣೆ, ರಸ್ತೆ ಸುರಕ್ಷತೆಯ ಅವಶ್ಯಕತೆಗಳು, ಎನ್ಎಚ್ 66 ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗಳು, ಅಗತ್ಯವಿರುವಡೆ ಫ್ಲೈ ಓವರ್ ಗಳು ಅವಶ್ಯಕತೆಗನುಗುಣವಾಗಿ ಹೆಚ್ಚುವರಿ ಅಂಡರ್ ಪಾಸ್ ಗಳು, ಒಟ್ಟಾರೆ ಅಪಘಾತ ರಹಿತ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಪ್ರಸ್ತುತ ಯೋಜನಾ ವರದಿ ಸಿದ್ದವಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ನಾನು ಕೇಳಿದ ಲಿಖಿತ ಪ್ರಶ್ನೆ 3176 ಕ್ಕೆ ಉತ್ತರಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರದಿಂದ ಹೆಜಮಾಡಿ, ಮುಂದುವರಿದು ಕೇರಳದ ಗಡಿಯಲ್ಲಿ ಅಪಾರ ವಾಹನ ದಟ್ಟಣೆಯಿಂದ ಆಗಬಹುದಾದ ಅವಘಡಗಳ ಹಿನ್ನೆಲೆಯಲ್ಲಿ ವಿವರವಾದ ಪ್ರಶ್ನೆ ಕೇಳಿದ್ದೆ. ಕಲ್ಯಾಣಪುರ-ಸಂತೆಕಟ್ಟೆಯ ಮೇಲ್ಸೇತುವೆ, ಅಂಬಲಪಾಡಿಯ ಬ್ರಿಡ್ಜ್ ಮತ್ತು ಕಟಪಾಡಿಯ ಅಂಡರ್ ಪಾಸ್ ಪ್ರಗತಿಯ ಬಗ್ಗೆ ಸಚಿವ ಗಡ್ಕರಿಯವರಿಗೆ ಅಭಿನಂದನೆ ತಿಳಿಸಿದ್ದು, ಪರ್ಕಳ ಸಹಿತ ಉಳಿದ ಕಾಮಗಾರಿಗಳಿಗೆ ವೇಗ ನೀಡಲು ಕೋರಿದ್ದೆ ಎಂದು ಅವರು ತಿಳಿಸಿದ್ದಾರೆ.
ಗಡ್ಕರಿಯವರು ನೀಡಿದ ಉತ್ತರದಲ್ಲಿ ಸಂತೆಕಟ್ಟೆಯ ಮೇಲ್ಸೇತುವೆಯ ಬಳಿ ಹೋಟೆಲ್ ದೋಣಿಮನೆ ಸಹಿತ ಉಳಿದ ಕಾಮಗಾರಿ ಬಗ್ಗೆ ಉಲ್ಲೇಖಿಸಿ ಶೀಘ್ರದಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ.
ಇದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಬಹುಬೇಗ ಮುಗಿಯುತ್ತದೆ ಎಂಬ ಆಶಯ ನನ್ನದು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.


,


















