ಬೆಳಗಾವಿ: ಖಾಲಿ ಇರುವ ಒಂದು ಮಹಿಳಾ ಸಚಿವರ
ಸ್ಥಾನವನ್ನು ಆದಷ್ಟು ಬೇಗ ತುಂಬಲಾಗುತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖಾತೆಗಳ ಬಗ್ಗೆ ಚರ್ಚೆ ಮಾಡಬಾರದು. ಯಾವುದೇ ಖಾತೆ ಸಿಕ್ಕರೂ ಅದನ್ನು ಉತ್ತಮವಾಗಿ ನಿರ್ವಹಿಸಿದರೆ ಆ ಖಾತೆಗೆ ಬೆಲೆ ಬರುತ್ತದೆ ಎಂದರು.
ಸಿಎಂ ಸೂಚನೆಯಂತೆ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಸ್ಥಿತಿ ಪರಿಶೀಲಿಸಿದ್ದೇನೆ. ಅಗತ್ಯವಿರುವ ಕಡೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಗೂಂಡಾಗಳ ರೀತಿಯಲ್ಲಿ ಸ್ಥಾನದಿಂದ ಕಿತ್ತುಹಾಕಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸವದಿ, ಹೊರಟ್ಟಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ.
ಮುಖ್ಯಮಂತ್ರಿಗಳಿಂದ ಸತ್ಕಾರ ಸ್ವೀಕರಿಸಿದ ಅವರು, ಗೌರವಯುತವಾಗಿ ಸಭಾಪತಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಂತರಿಕ ವಿಚಾರ ನನಗೆ ಗೊತ್ತಿಲ್ಲ. ಹೀಗಾಗಿ ಈ ಕುರಿತು ಮಾತನಾಡುವುದಿಲ್ಲ ಎಂದರು.


,


















