ಬೆಂಗಳೂರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ನಿಯಮಿತ ವ್ಯಾಸಂಗದ (ರೆಗ್ಯುಲರ್) ಮೂಲಕ ಮೊದಲ ಪದವಿ ಪಡೆದ ಅಭ್ಯರ್ಥಿಗೆ ಮೂರು ವರ್ಷಗಳ ಎಲ್ಎಲ್ಬಿ ಕೋರ್ಸ್ಗೆ ಪ್ರವೇಶ ಪಡೆಯಲು ಪೂರ್ಣ ಅರ್ಹತೆ ಇರುತ್ತದೆ; ಪದವಿ ಮಾನ್ಯವಾಗಿರುವಾಗ ಹಿಂದಿನ ಪಿಯುಸಿ ಅಥವಾ 10+2 ವಿದ್ಯಾರ್ಹತೆಯ ಸಿಂಧುತ್ವವನ್ನು ಪ್ರಶ್ನಿಸಿ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಈ ತೀರ್ಪು ಮಾದರಿ ಪೂರ್ವನಿದರ್ಶನವಾಗಿ (Precedent) ಹೊರಹೊಮ್ಮಿದ್ದು, ಸಾಂಪ್ರದಾಯಿಕ ಪಿಯುಸಿ ಬದಲಿಗೆ ಜೆಒಸಿ ಅಥವಾ ಇತರ ವೃತ್ತಿಪರ ಡಿಪ್ಲೊಮಾ ಮುಗಿಸಿ ನಂತರ ರೆಗ್ಯುಲರ್ ಪದವಿ ಪಡೆದು ಕಾನೂನು ವ್ಯಾಸಂಗದ ಕನಸು ಕಾಣುತ್ತಿದ್ದ ಬೃಹತ್ ವಿದ್ಯಾರ್ಥಿ ಸಮೂಹಕ್ಕೆ ಕಾನೂನುಬದ್ಧ ರಕ್ಷಣೆ ಮತ್ತು ನ್ಯಾಯ ಒದಗಿಸಿದಂತಾಗಿದೆ.
Advocate ಪ್ರಸನ್ನ ಶೆಟ್ಟಿ ಅವರ ಬಲವಾದ ವಾದವೇನು?
ಉಡುಪಿ ಜಿಲ್ಲೆ ಕಾರ್ಕಳ ಮೂಲದ ರಾಕೇಶ್ ಶೆಟ್ಟಿ ಪರವಾಗಿ ವಾದ ಮಂಡಿಸಿದ ಹೈಕೋರ್ಟ್ ವಕೀಲ ಕೆ. ಪ್ರಸನ್ನ ಶೆಟ್ಟಿ, ಕಾನೂನು ವಿಶ್ವವಿದ್ಯಾಲಯದ ಕ್ರಮವು ಕಾನೂನುಬಾಹಿರ ಹಾಗೂ ನಿಯಮಗಳ ತಪ್ಪು ವ್ಯಾಖ್ಯಾನದಿಂದ ಕೂಡಿದೆ ಎಂದು ಬಲವಾಗಿ ಸಮರ್ಥಿಸಿದರು:
* ಬಿಸಿಐ ನಿಯಮ 5(ಎ) ಅನ್ವಯ ಪದವಿಯೇ ಮೂಲಾರ್ಹತೆ: ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಕಾನೂನು ಶಿಕ್ಷಣ ನಿಯಮಾವಳಿ-2008ರ ನಿಯಮ 5(ಎ) ಪ್ರಕಾರ, ಮೂರು ವರ್ಷಗಳ ಎಲ್ಎಲ್ಬಿ ಪ್ರವೇಶಕ್ಕೆ ಮಾನ್ಯತೆ ಪಡೆದ ಯಾವುದೇ ವಿಷಯದ ಪದವಿಯೇ ‘ಮೊದಲ ಪದವಿ’ ಅರ್ಹತೆ.
* ಮಂಗಳೂರು ವಿಶ್ವವಿದ್ಯಾಲಯದ ಪದವಿ ಅಧಿಕೃತ: ಅರ್ಜಿದಾರರು 1999ರಲ್ಲಿ ಜೆಒಸಿ ಮುಗಿಸಿ, ನಂತರ ಭುವನೇಂದ್ರ ಕಾಲೇಜಿನಲ್ಲಿ ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ 2004ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದಿದ್ದಾರೆ. ಈ ಪದವಿಯನ್ನು ವಿಶ್ವವಿದ್ಯಾಲಯವಾಗಲಿ, ನ್ಯಾಯಾಲಯವಾಗಲಿ ರದ್ದುಪಡಿಸಿಲ್ಲ.
* ಪೊಲೀಸ್ ಕಾನ್ಸ್ಟೆಬಲ್ ಪ್ರಕರಣದ ಹೋಲಿಕೆ ತಪ್ಪು: ಕೆಎಸ್ಎಲ್ಯು ಉಲ್ಲೇಖಿಸುತ್ತಿರುವ ಹಿಂದಿನ ‘ಕೃಷ್ಣಮೂರ್ತಿ ಪ್ರಕರಣ’ವು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಗೆ ಸಂಬಂಧಿಸಿದ್ದು, ಅಲ್ಲಿ ನೇಮಕಾತಿ ಅಧಿಸೂಚನೆಯಲ್ಲೇ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಎಂದಿತ್ತು. ಆದರೆ ಇಲ್ಲಿ ಪ್ರವೇಶ ಬಯಸುತ್ತಿರುವುದು ಮೂರು ವರ್ಷಗಳ ಕಾನೂನು ಪದವಿಗೆ; ಇದಕ್ಕೆ ನಿಗದಿತ ವಿದ್ಯಾರ್ಹತೆ ‘ಪದವಿ’ಯೇ ಹೊರತು ಪಿಯುಸಿ ಅಲ್ಲ. ಹೀಗಾಗಿ ಅರ್ಜಿದಾರರ ಬಿಕಾಂ ಪದವಿ ಮಾನ್ಯವಾಗಿರುವಾಗ ಹಿಂದಿನ ಜೆಒಸಿಯನ್ನು ಮುಂದಿಟ್ಟುಕೊಂಡು ಅರ್ಹತಾ ಪ್ರಮಾಣಪತ್ರ ನಿರಾಕರಿಸುವುದು ಅನ್ಯಾಯ ಎಂದು ವಾದಿಸಿದರು.
ನ್ಯಾಯಪೀಠದ ಮಹತ್ವದ ಅವಲೋಕನ ಹಾಗೂ ತೀರ್ಪು
ಪ್ರಸನ್ನ ಶೆಟ್ಟಿ ಅವರ ವಾದವನ್ನು ಎತ್ತಿಹಿಡಿದ ವಿಭಾಗೀಯ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ:
* ತಕ್ಷಣದ ಹಿಂದಿನ ವಿದ್ಯಾರ್ಹತೆಯೇ ಮಾನದಂಡ: 3 ವರ್ಷಗಳ ಎಲ್ಎಲ್ಬಿ ಪ್ರವೇಶಕ್ಕೆ ತಕ್ಷಣದ ಹಿಂದಿನ ವಿದ್ಯಾರ್ಹತೆಯಾದ ‘ಮೊದಲ ಪದವಿ’ ಪ್ರಮುಖ ಮಾನದಂಡವಾಗುತ್ತದೆ. ಅಭ್ಯರ್ಥಿಯು ಮುಕ್ತ ವಿಶ್ವವಿದ್ಯಾಲಯದ ನೇರ ಪದ್ಧತಿಯ ಮೂಲಕ ಪದವಿ ಪಡೆದಿಲ್ಲ; ನಿಯಮಿತ ಕಾಲೇಜು ವ್ಯಾಸಂಗದ ಮೂಲಕ ಅಧಿಕೃತವಾಗಿ ಬಿಕಾಂ ಪದವಿ ಗಳಿಸಿದ್ದಾರೆ.
* ಪದವಿಯ ಸಿಂಧುತ್ವ ಪ್ರಶ್ನಿಸುವಂತಿಲ್ಲ: ಮಾನ್ಯತೆ ಪಡೆದ ವಿಶ್ವವಿದ್ಯಾಲಯವೊಂದು ನಿಯಮಾನುಸಾರ ಪದವಿ ನೀಡಿದ ಮೇಲೆ, ಆ ಪದವಿ ರದ್ದಾಗದ ಹೊರತು ಮತ್ತೊಂದು ಪ್ರಾಧಿಕಾರವು ಹಿಂದಿನ ವಿದ್ಯಾರ್ಹತೆಯನ್ನು ಕೆದಕಿ ಅಭ್ಯರ್ಥಿಯ ಅರ್ಹತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಹಾಗೆ ಮಾಡಲು ಹೋದರೆ ಅದು ಅನಗತ್ಯ ಗೊಂದಲಗಳಿಗೆ ನಾಂದಿ ಹಾಡುತ್ತದೆ ಎಂದು ಮದ್ರಾಸ್ ಮತ್ತು ಬಾಂಬೆ ಹೈಕೋರ್ಟ್ನ ಪೂರ್ಣಪೀಠದ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠ ಹೇಳಿದೆ.
* ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿದ ಹೈ ಕೋರ್ಟ್: ಕೆಎಸ್ಎಲ್ಯು ಹೊರಡಿಸಿದ್ದ ನಿರಾಕರಣಾ ಹಿಂಬರಹವನ್ನು ರದ್ದುಪಡಿಸಿ, ಅರ್ಜಿದಾರರಿಗೆ ತಕ್ಷಣವೇ ಅರ್ಹತಾ ಪ್ರಮಾಣಪತ್ರ (Eligibility Certificate) ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠವು ಎತ್ತಿಹಿಡಿದು, ವಿಶ್ವವಿದ್ಯಾಲಯದ ಮೇಲ್ಮನವಿಯನ್ನು ಸಂಪೂರ್ಣವಾಗಿ ವಜಾಗೊಳಿಸಿತು.
ವಿದ್ಯಾರ್ಥಿ ಸಮೂಹಕ್ಕೆ ಸಿಕ್ಕ ಮಾದರಿ ಜಯ
ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಜೆಒಸಿ, ತಾಂತ್ರಿಕ ಅಥವಾ ವೃತ್ತಿಪರ ಡಿಪ್ಲೊಮಾ ಮುಗಿಸಿ, ನಂತರ ಮುಕ್ತ ಅಥವಾ ನಿಯಮಿತ ಕಾಲೇಜುಗಳ ಮೂಲಕ ಬಿಎ, ಬಿಕಾಂ ಮುಂತಾದ ಪದವಿಗಳನ್ನು ಪಡೆದುಕೊಂಡಿದ್ದಾರೆ. ಆದರೆ, 3 ವರ್ಷಗಳ ಎಲ್ಎಲ್ಬಿ ಪ್ರವೇಶಕ್ಕೆ ಮುಂದಾದಾಗ ’10+2 ಇಲ್ಲ ಅಥವಾ ಜೆಒಸಿಯು ಪಿಯುಸಿಗೆ ಸಮಾನವಲ್ಲ’ ಎಂಬ ತಾಂತ್ರಿಕ ಕಾರಣವೊಡ್ಡಿ ಕಾನೂನು ವಿಶ್ವವಿದ್ಯಾಲಯವು ಪ್ರವೇಶ ನಿರಾಕರಿಸುತ್ತಾ ಬಂದಿತ್ತು.
ಇದೀಗ ಹೈಕೋರ್ಟ್ನ ಈ ಆದೇಶವು ಕೇವಲ ಒಬ್ಬ ಅರ್ಜಿದಾರರಿಗೆ ಸೀಮಿತವಾಗದೆ, ಭವಿಷ್ಯದಲ್ಲಿ ಇಂತಹದೇ ಹಿನ್ನೆಲೆ ಹೊಂದಿರುವ ಎಲ್ಲ ಪದವೀಧರರಿಗೂ ಕಾನೂನು ಶಿಕ್ಷಣದ ಬಾಗಿಲು ತೆರೆದಂತಾಗಿದೆ. ಪದವಿ ಅಧಿಕೃತವಾಗಿದ್ದರೆ ಹಿಂದಿನ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಉನ್ನತ ಶಿಕ್ಷಣವನ್ನು ನಿರಾಕರಿಸುವಂತಿಲ್ಲ ಎಂಬ ಈ ತೀರ್ಪು ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.


,


















