| Latest Version 9.0.7 |

State News

43.44 ಲಕ್ಷ ರೂ. ವೆಚ್ಚದಲ್ಲಿ ಸೋನೋಲಿ ಶಾಲೆ ನವೀಕರಣ: ನೂತನ ಕಟ್ಟಡ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್

43.44 ಲಕ್ಷ ರೂ. ವೆಚ್ಚದಲ್ಲಿ ಸೋನೋಲಿ ಶಾಲೆ ನವೀಕರಣ: ನೂತನ ಕಟ್ಟಡ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್

ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಶೈಕ್ಷಣಿಕ, ಆರೋಗ್ಯ ಹಾಗೂ ಕೌಶಲ್ಯಾಭಿವೃದ್ಧಿಗೂ ಆದ್ಯತೆ: ಸಚಿವೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದಲ್ಲಿ ಸುಮಾರು 43.44 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ನೂತನ ಕಟ್ಟಡವನ್ನು ಮಾಜಿ ಸಚಿವೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ, ಗಟಾರ, ದೇವಾಲಯಗಳು, ಶಾಲಾ ಕಂಪೌಂಡ್‌ಗಳು ಹಾಗೂ ಶಾಲಾ ಕೊಠಡಿಗಳು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಆರೋಗ್ಯ ವ್ಯವಸ್ಥೆಯ ಸುಧಾರಣೆ, ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣ ಹಾಗೂ ಯುವಕರಿಗೆ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಕೇವಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸೀಮಿತವಾಗದೆ, ಜನರ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಉತ್ತಮ ವಾತಾವರಣ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ನವೀಕರಣಗೊಂಡ ಶಾಲೆಯ ಸುಧಾರಿತ ಮೂಲಸೌಕರ್ಯಗಳು, ಸುಂದರ ತರಗತಿ ಕೊಠಡಿಗಳು ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಲಿ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ರಘು ಖಂಡೇಕರ್, ಗುರುನಾಥ್ ಪಾಟೀಲ, ಪ್ರಕಾಶ ಪಾಟೀಲ, ಮನೋಹರ್ ಜಾಂಗ್ರೂಚಿ, ಪರಶುರಾಮ ಜಾಂಗ್ರೂಚಿ, ಗುರುನಾಥ್ ಜಾಂಗ್ರೂಚಿ, ಅಶೋಕ್ ಕಡೋಲ್ಕರ್, ದತ್ತಾ ಪಾಟೀಲ, ಬಾಬು ಪಾಟೀಲ, ಕಲ್ಲಪ್ಪ ಪಾಟೀಲ, ನಾಗೇಶ್ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಪುಂಡಲೀಕ್, ಇಂಜಿನಿಯರ್ ಶೆಗುಣಸಿ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ, ರೋಜಗಾರ್ ಯುವಕ ಮಂಡಳದ ಸದಸ್ಯರು, ಪಂಚ ಕಮಿಟಿ ಸದಸ್ಯರು, ಎಸ್‌ಡಿಎಂಸಿ ಸಮಿತಿಯ ಮಾಜಿ ಹಾಗೂ ಹಾಲಿ ಸದಸ್ಯರು, ಸಚಿನ್ ಮೊರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Team Udayaprabha
";