| Latest Version 9.0.7 |

State News

ಕಾನೂನು ಶಿಕ್ಷಣದೊಂದಿಗೆ ಪ್ರಾಯೋಗಿಕ ತರಬೇತಿಯೂ ಅಗತ್ಯ: ನ್ಯಾಯಮೂರ್ತಿ ಅನಿಲ್ ಬಿ. ಕಟ್ಟಿ

ಬೆಳಗಾವಿ: ಕಾನೂನು ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಕೇವಲ ಸೈದ್ಧಾಂತಿಕ ಜ್ಞಾನವಷ್ಟೇ ಸಾಲದು. ಕಾನೂನು ಶಿಕ್ಷಣದೊಂದಿಗೆ ಪ್ರಾಯೋಗಿಕ ತರಬೇತಿಯೂ ಸಮನ್ವಯವಾಗಿ ಸಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅನಿಲ್ ಬಿ. ಕಟ್ಟಿ ಹೇಳಿದರು.

ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯವು ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (KILPAR) ಸಹಯೋಗದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಕಾಲಘಟ್ಟದಲ್ಲಿ ಕಾನೂನು ಶಿಕ್ಷಣದ ಮರುರೂಪಣೆ’ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪರಿಸ್ಥಿತಿಯಲ್ಲಿ ಕಾನೂನು ಶಿಕ್ಷಣ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಪಠ್ಯ ಆಧಾರಿತ ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಅನುಭವವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಮುತಾಲಿಕ್ ಮಾತನಾಡಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ದೊರೆಯುವ ಮಹತ್ವ ಹಾಗೂ ಪ್ರಯೋಜನಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಇಂತಹ ಇನ್ನಷ್ಟು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ. (ಡಾ.) ಸಿ.ಎಸ್. ಪಾಟೀಲ ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ಆರು ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಕೋಲ್ಕತ್ತಾದ ಡಬ್ಲ್ಯೂಬಿಎನ್‌ಯುಜೆಎಸ್ (WBNUJS) ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಒ.ವಿ. ನಂದಿಮಠ ಅವರು ‘ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಲ್ಲಿನ ನಾವೀನ್ಯತೆ’ ಕುರಿತು ಮಾತನಾಡಿದರು.

ಕೊಚ್ಚಿಯ ಎನ್‌ಯುಎಎಲ್‌ಎಸ್ (NUALS) ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಜಿ.ಬಿ. ರೆಡ್ಡಿ ಅವರು ‘ಸಮಕಾಲೀನ ಸವಾಲುಗಳು ಹಾಗೂ ಕಾನೂನು, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕಾನೂನು ಶಿಕ್ಷಣದ ಉದಯೋನ್ಮುಖ ಕ್ಷೇತ್ರಗಳು’ ಕುರಿತು ವಿಚಾರ ಮಂಡಿಸಿದರು.

ಡಾ. ವಿಶ್ವನಾಥ್ ಎಂ. ಅವರು ‘ಕಾನೂನು ವೃತ್ತಿಯ ನೈತಿಕತೆ, ಮೌಲ್ಯಗಳು ಮತ್ತು ಭವಿಷ್ಯ’, ಡಾ. ಸುನೀಲ್ ಬಾಗಡೆ ಅವರು ‘ಆಡಳಿತ, ನಿಯಂತ್ರಣಗಳು ಮತ್ತು ಸಾಂಸ್ಥಿಕ ಸುಧಾರಣೆಗಳು’, ಡಾ. ಬಾಬು ದರ್ಗದ ಅವರು ‘ಕೌಶಲ್ಯಗಳು, ಉದ್ಯೋಗಾವಕಾಶ ಮತ್ತು ವೃತ್ತಿಪರ ಸನ್ನದ್ಧತೆ’ ಹಾಗೂ ಡಾ. ಪ್ರಸನ್ನಕುಮಾರ ಡಿ. ಅವರು ‘ಕಾನೂನು ಸಂಶೋಧನೆ ಮತ್ತು ಬೋಧನೆಯಲ್ಲಿ ಅಂತರಶಿಸ್ತೀಯ ವಿಧಾನಗಳು’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ವಿಚಾರ ಸಂಕಿರಣದಲ್ಲಿ ಸುಮಾರು 20 ಮಂದಿ ಶೈಕ್ಷಣಿಕ ತಜ್ಞರು ಹಾಗೂ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್ ಅವರು ಸ್ವಾಗತಿಸಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಚಯಿಸಿದರು. ವಿಚಾರ ಸಂಕಿರಣದ ವಿಭಾಗದ ಸಂಯೋಜಕಿ ಡಾ. ಶಿಲ್ಪಾ ಎ. ರೈಕರ್ ಅವರು ಒಂದು ದಿನದ ವಿಚಾರ ಸಂಕಿರಣದ ಉದ್ದೇಶ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು.

ಜಾನ್ಹವಿ ಮತ್ತು ತಂಡದವರು ಪ್ರಾರ್ಥಿಸಿದರು. ಸುನಿಧಿ ಜೋಶಿ ನಿರೂಪಿಸಿದರು. ಕಿರಣಗೌಡ ವಂದಿಸಿದರು.

ಮಹಾವಿದ್ಯಾಲಯದ ಬೋಧಕ ವರ್ಗದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Team Udayaprabha
";