| Latest Version 9.0.7 |

Sports News

IPL ಆರ್‌ಸಿಬಿಗೆ ಅಗ್ರಸ್ಥಾನ : ಇನ್ಮುಂದೆ ಇನ್ನಷ್ಟು ರೋಚಕ ಪಂದ್ಯಗಳು 

 

 

 

 

ಬೆಂಗಳೂರು: ಇನ್ಮುಂದೆ ಐಪಿಎಲ್ ಕ್ರಿಕೆಟ್ ಉಪಾಂತ್ಯ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ರೋಚಕ ಹಂತವನ್ನು ತಲುಪಿದ್ದು, ಪ್ಲೇ-ಆಫ್‌ಗೆ ವೇದಿಕೆ ಸಿದ್ಧಗೊಂಡಿದೆ. 10 ತಂಡಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ನಾಲ್ಕು ತಂಡಗಳು ಪ್ಲೇ-ಆಫ್‌ಗೆ ತೇರ್ಗಡೆ ಹೊಂದಿದ್ದು, ಉಳಿದ ಆರು ತಂಡಗಳು ನಿರ್ಗಮಿಸಿವೆ.

 

ಲೀಗ್ ಹಂತದಲ್ಲಿ 14 ಪಂದ್ಯಗಳ ಬಳಿಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿದೆ. ಆರ್‌ಸಿಬಿ ಜೊತೆಗೆ ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿವೆ.

 

ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್‌ನಲ್ಲಿ ರಜತ್ ಪಾಟೀದಾರ್ ಬಳಗ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ ಟಿಕೆಟ್ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಮೇ 29ರಂದು ಎರಡನೇ ಕ್ವಾಲಿಫೈಯರ್‌ನಲ್ಲಿ ಆಡಬೇಕು.

 

ಮೇ 27ರಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದ ತಂಡವು ಎರಡನೇ ಕ್ವಾಲಿಫೈಯರ್‌‌ಗೆ ಪ್ರವೇಶಿಸಲಿದೆ. ಸೋತ ತಂಡ ನಿರ್ಗಮಿಸಲಿದೆ.

 

ಮೇ 29ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಸವಾಲನ್ನು ಎದುರಿಸಲಿದೆ. ಗೆದ್ದ ತಂಡ ಫೈನಲ್‌ಗೆ ಲಗ್ಗೆ ಇಡಲಿದೆ.

 

ಮೊದಲ ಕ್ವಾಲಿಫೈಯರ್ ಧರ್ಮಶಾಲಾದಲ್ಲಿ ನಡೆಯಲಿದೆ. ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್‌ ಪಂದ್ಯಗಳು ಮುಲ್ಲನಪುರದಲ್ಲಿ ನಿಗದಿಯಾಗಿವೆ. ಫೈನಲ್ ಪಂದ್ಯ ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.

 

ಅಗ್ರಸ್ಥಾನದಲ್ಲಿರುವ ಮೊದಲ ಮೂರು ತಂಡಗಳು ಸಮಾನ 18 ಅಂಕಗಳನ್ನು ಪಡೆದರೂ ರನ್‌ರೇಟ್ ಆಧಾರದಲ್ಲಿ ಆರ್‌ಸಿಬಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆರ್‌ಸಿಬಿ

+0.783, ಗುಜರಾತ್ +0.695 ಹಾಗೂ ಸನ್‌ರೈಸರ್ಸ್ +0.524ರ ರನ್‌ರೇಟ್ ಹೊಂದಿದೆ. ರಾಜಸ್ಥಾನ 16 ಅಂಕಗಳೊಂದಿಗೆ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ.

 

ಒಟ್ಟಾರೆಯಾಗಿ 18 ವರ್ಷಗಳ ಬಳಿಕ 2025ರಲ್ಲಿ ಪ್ರಶಸ್ತಿಯ ಬರ ನೀಗಿಸಿದ್ದ ಆರ್‌ಸಿಬಿ ಈಗ ಸತತ ಎರಡನೇ ಸಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

 

ಐಪಿಎಲ್

ಪ್ಲೇ-ಆಫ್ ವೇಳಾಪಟ್ಟಿ:

 

ಮೊದಲ ಕ್ವಾಲಿಫೈಯರ್:

 

ಮೇ 26 (ಮಂಗಳವಾರ): ಬೆಂಗಳೂರು vs ಗುಜರಾತ್, ಧರ್ಮಶಾಲಾ

 

ಎಲಿಮಿನೇಟರ್:

 

ಮೇ 27 (ಬುಧವಾರ): ಹೈದರಾಬಾದ್ vs ರಾಜಸ್ಥಾನ, ಮುಲ್ಲನಪುರ

 

ಎರಡನೇ ಕ್ವಾಲಿಫೈಯರ್:

 

ಮೇ 29 (ಶುಕ್ರವಾರ): ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ vs ಎಲಿಮಿನೇಟರ್‌ನಲ್ಲಿ ವಿಜೇತ ತಂಡ, ಮುಲ್ಲನಪುರ

 

ಫೈನಲ್:

 

ಮೇ 31 (ಭಾನುವಾರ): ಮೊದಲ ಕ್ವಾಲಿಫೈಯರ್‌ನಲ್ಲಿ ವಿಜೇತ ತಂಡ vs ಎರಡನೇ ಕ್ವಾಲಿಫೈಯರ್‌ನಲ್ಲಿ ವಿಜೇತ ತಂಡ, ಅಹಮದಾಬಾದ್

Team Udayaprabha
";