| Latest Version 9.0.7 |

Local News

ಶಾಂತಿ-ಸಹಬಾಳ್ವೆಯೇ ಮಾನವೀಯತೆಯ ದಾರಿ: ಪ್ರಾದೇಶಿಕ ಆಯುಕ್ತೆ ಕೆ. ಎಂ. ಜಾನಕಿ

 

 

ಬೆಳಗಾವಿ : ವಿಶ್ವದಾದ್ಯಂತ ದೇಶ-ದೇಶಗಳ ನಡುವೆ ಯುದ್ಧ, ಜಾತಿ-ಧರ್ಮದ ಹೆಸರಿನಲ್ಲಿ ಕಾದಾಟಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಮಾನವೀಯ ನಡವಳಿಕೆಯಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಪ್ರಾದೇಶಿಕ ಆಯುಕ್ತೆ ಕೆ. ಎಂ. ಜಾನಕಿ ತಿಳಿಸಿದರು.

 

ಸೆಪ್ಟೆಂಬರ್ 21ರ ವಿಶ್ವ ಶಾಂತಿ ದಿನದ ಅಂಗವಾಗಿ ಭಾನುವಾರ ನಗರದ ಅನಗೋಳ ಬ್ರಹ್ಮಕುಮಾರೀಸ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

 

ಶಾಂತಿ ಎಂದರೆ ಕೇವಲ ಯುದ್ಧವಿಲ್ಲದಿರುವುದಲ್ಲ; ಅದು ಮನಸ್ಸಿನ ನೆಮ್ಮದಿ, ಮನೆಯಲ್ಲಿ ಸೌಹಾರ್ದತೆ, ಸಮಾಜದಲ್ಲಿ ಸಹಬಾಳ್ವೆ ಎಂದು ಹೇಳಿದರು.

 

“ನಾವು ಸ್ವಾಭಾವಿಕ ಪ್ರಕೃತಿಯಲ್ಲಿ ಲೀನವಾಗಿ ನಡೆದರೆ ಶುದ್ಧ, ಸ್ವಸ್ಥ, ಸತ್ಚಾರಿತ್ರ್ಯದ ಜೀವನ ನಡೆಸಬಹುದು. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದು, ಸರಳತೆ, ಸತ್ಯ ಮತ್ತು ಪ್ರೀತಿಯಿಂದ ಬದುಕುವುದು ನಮ್ಮ ಸಂಸ್ಕೃತಿಯಾಗಬೇಕು. ಮನೆ-ಮನೆಗಳಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ನಾವೆಲ್ಲರೂ ಶ್ರಮಿಸಬೇಕು. ನಮ್ಮ ಮನೆಯಿಂದಲೇ ಶಾಂತಿಯ ಪ್ರಯೋಗ ಶುರುವಾಗಬೇಕು.

ಶಾಂತಿ-ನೆಮ್ಮದಿಯಿಂದ ನಾವು ಬದುಕಲು ಕಲಿತರೆ ಮಾತ್ರ ಮನುಕುಲಕ್ಕೆ ಉಳಿವು ಇದೆ. ಇಲ್ಲದಿದ್ದರೆ ನಾವು ನಮ್ಮನ್ನೇ ನಾಶ ಮಾಡಿಕೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು.

 

“ನಾವು ಸುಸಂಸ್ಕೃತವಾಗಿ ಬದುಕಲು ಪ್ರತಿಕ್ಷಣ ಪ್ರಯತ್ನಿಸಬೇಕಿದೆ. ನಮ್ಮ ಆಲೋಚನೆ, ಮಾತು, ನಡವಳಿಕೆ – ಎಲ್ಲವೂ ಶಾಂತಿಯಿಂದ ಕೂಡಿರಬೇಕು. ಮಾನವ ಜಾತಿಯೊಂದೇ ಎಂಬುದನ್ನು ಅರಿತರೆ ಮಾತ್ರ ನಮ್ಮ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಜಾತಿ, ಧರ್ಮ, ಭಾಷೆ, ದೇಶ – ಇವೆಲ್ಲವೂ ಬಾಹ್ಯ; ಒಳಗೆ ನಾವೆಲ್ಲರೂ ಒಂದೇ.”

ವಿಶ್ವ ಶಾಂತಿ ದಿನವನ್ನು ಕೇವಲ ಆಚರಿಸಿ ಮುಗಿಸಬಾರದು. ಪ್ರತಿ ದಿನವೂ ನಮ್ಮೊಳಗೆ ಶಾಂತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಾನಕಿ ಒತ್ತಿ ಹೇಳಿದರು.

 

“ಧ್ಯಾನ, ಪ್ರಾರ್ಥನೆ, ಒಳ್ಳೆಯ ಆಲೋಚನೆಗಳು – ಇವುಗಳಿಂದ ನಾವು ಆಂತರಿಕ ಶಾಂತಿಯನ್ನು ಸಾಧಿಸಬಹುದು. ಆಂತರಿಕ ಶಾಂತಿ ಇದ್ದಾಗ ಮಾತ್ರ ಬಾಹ್ಯ ಶಾಂತಿ ಸಾಧ್ಯ ಎಂದು ಹೇಳಿದರು.

 

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರೀಸ್ ಪ್ರಾದೇಶಿಕ ಮುಖ್ಯಸ್ಥೆ ಬಿ. ಕೆ. ಅಂಬಿಕಾ ದೀದಿ ಮಾತನಾಡಿ “ಶಾಂತಿಯ ಮೂಲ ನಮ್ಮ ಮನಸ್ಸಿನಲ್ಲಿದೆ. ನಾವು ನಮ್ಮ ಮನಸ್ಸನ್ನು ಶುದ್ಧಗೊಳಿಸಿದಾಗ, ಜಗತ್ತು ಶುದ್ಧವಾಗುತ್ತದೆ” ಎಂದು ಅವರು ನುಡಿದರು.

 

ಧ್ಯಾನ, ಶಾಂತಿ ಪ್ರತಿಜ್ಞೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ನಾಗರಿಕರು, ಬ್ರಹ್ಮಕುಮಾರೀಸ್ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಎಲ್ಲರೂ ಶಾಂತಿ ಸಂದೇಶವನ್ನು ಹರಡುವ ಸಂಕಲ್ಪ ತೆಗೆದುಕೊಂಡರು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿಕೆ ಮೀನಾಕ್ಷಿ, ಬಿಕೆ ರೂಪಾ, ಬಿಕೆ ಶೋಭಾ, ಬಿಕೆ ಸಾಧನಾ, ಬಿಕೆ ಮಹಾದೇವಿ, ಬಿಕೆ ಶಿವಲೀಲಾ, ಬಿಕೆ ಶೀತಲ್, ಬಿಕೆ ಲಕ್ಷ್ಮಿ, ಬಿಕೆ ಅಂಬರ್ ಸೆಟ್ ಜೋಶಿ,

ಮನೋಹರ್ ಕುಲಕರ್ಣಿ, ದತ್ತಾತ್ರೇಯ, ಬಿಕೆ ಮಹೇಶ್, ಬಿ ಕೆ ಕಾಶಿನಾಥ್, ಬಿ ಕೆ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.ರಾಜ ಯೋಗಿನಿ ಬಿಕೆ ವಿದ್ಯಾ ಅಕ್ಕನವರು ಸ್ವಾಗತಿಸಿ ನಿರೂಪಿಸಿದರು.

Team Udayaprabha
";