| Latest Version 9.0.7 |

Sports News

ಕ್ರಿಕೆಟ್ ಪಂದ್ಯದಲ್ಲಿ ರನ್ ಔಟ್ ವಿವಾದ: ಚಾಕುವಿನಿಂದ ಇರಿದು ಅಂಪೈರ್ ಹತ್ಯೆ  

 

 

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ರನ್ ಔಟ್ ತೀರ್ಪಿಗೆ ಸಂಬಂಧಿಸಿದಂತೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, 21 ವರ್ಷದ ಯುವ ಅಂಪೈರ್‌ನನ್ನು ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.

 

ಭಾನುವಾರ ಸಂಜೆ ಸ್ಥಳೀಯ ಮೈದಾನವೊಂದರಲ್ಲಿ ಮೂರು ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಡೋಲಾ ಅಜಿತ ಬಾಬು ಮತ್ತು ಅವರ ಸ್ನೇಹಿತ ಬುಡುಮುರಿ ಚಿರಂಜೀವಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಂದ್ಯದ ವೇಳೆ ‘ರನ್ ಔಟ್’ ವಿಚಾರವಾಗಿ ಎರಡು ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಅಂಪೈರ್‌ಗಳು ಮಧ್ಯಪ್ರವೇಶಿಸಿ ಮೈದಾನದಲ್ಲೇ ಈ ಗಲಾಟೆಯನ್ನು ತಿಳಿಗೊಳಿಸಿದ್ದರು.

 

ಆದರೆ, ಪಂದ್ಯವನ್ನು ವೀಕ್ಷಿಸುತ್ತಿದ್ದ ಕಾಂತ ಕಿಶೋರ (26) ಎಂಬಾತ ಅನಗತ್ಯವಾಗಿ ಮಧ್ಯಪ್ರವೇಶಿಸಿ ಅಂಪೈರ್ ಹಾಗೂ ಆಟಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ ಎನ್ನಲಾಗಿದೆ.

 

ಪಂದ್ಯ ಮುಗಿದ ಬಳಿಕ, “ವಿಷಯವನ್ನು ಬಗೆಹರಿಸಿಕೊಳ್ಳೋಣ ಬನ್ನಿ” ಎಂದು ಕಿಶೋರ ಅಂಪೈರ್‌ಗಳನ್ನು ಕರೆದಿದ್ದ ಎಂದು ಹೇಳಲಾಗಿದೆ. ಅಜಿತ ಬಾಬು ಮತ್ತು ಚಿರಂಜೀವಿ ಪಡಿಗಡ್ಲಿ ಜಂಕ್ಷನ್ ಬಳಿ ಹೋದಾಗ, ಮದ್ಯದ ಅಮಲಿನಲ್ಲಿದ್ದ ಕಿಶೋರ ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ ಏಕಾಏಕಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದ ಈತ, ಅಜಿತ ಬಾಬು ಅವರ ಎದೆಗೆ ಇರಿದಿದ್ದಾನೆ. ತಡೆಯಲು ಬಂದ ಚಿರಂಜೀವಿ ಹಾಗೂ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿವೆ.

 

 

ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಅಜಿತ ಬಾಬು ಅವರನ್ನು ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಅಜಿತ ಬಾಬು ಅವರ ತಂದೆ ನೀಡಿದ ದೂರಿನ ಮೇರೆಗೆ, ಆರೋಪಿ ಕಾಂತ ಕಿಶೋರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Team Udayaprabha
";