| Latest Version 9.0.7 |

Sports News

ಕೊನೆಯ ಪಂದ್ಯ ಆಡುತ್ತಾರಾ ಮಹಿ?

 

 

ಚೆನ್ನೈ :

44 ವರ್ಷದ ಎಂ.ಎಸ್. ಧೋನಿ ಅವರು ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್‌ನಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಇಂದಿನ ಪಂದ್ಯವು ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವುದರಿಂದ, ಎಂ.ಎಸ್. ಧೋನಿ ಅವರು ಕಣಕ್ಕಿಳಿಯಲಿದ್ದಾರೆ ಮತ್ತು ಇದು ಅವರ ಕೊನೆಯ ಐಪಿಎಲ್ ಪಂದ್ಯವಾಗಲಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

 

ವಿಶೇಷವಾಗಿ ಪಂದ್ಯಕ್ಕೂ ಮುನ್ನ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಚೆನ್ನೈ ಮೈದಾನಕ್ಕೆ ಆಗಮಿಸಿರುವುದರಿಂದ, ಇಂದಿನ ಪಂದ್ಯದ ಮೂಲಕ ಚೆನ್ನೈ ಫ್ರಾಂಚೈಸಿ ಧೋನಿ ಅವರಿಗೆ ಬೀಳ್ಕೊಡುಗೆ ನೀಡಲಿದೆ ಎಂಬ ವದಂತಿಗಳು ಕಳೆದ 48 ಗಂಟೆಗಳಲ್ಲಿ ಹೆಚ್ಚಾಗಿವೆ.

 

ಐದು ವರ್ಷಗಳ ಹೇಳಿಕೆಗೆ ಈಗ ಜೀವ

 

ಧೋನಿ ಅವರು 2021ರ ಐಪಿಎಲ್ ಪಂದ್ಯ ಒಂದರ ಬಳಿಕ ನೀಡಿದ್ದ ಹೇಳಿಕೆಗೆ ಈಗ ಜೀವ ಬಂದಿದೆ. ಅವರು ಆಗ ಚೆನ್ನೈನಲ್ಲಿ ತಮ್ಮ ಕೊನೆಯ ಪಂದ್ಯ ಆಡುವುದಾಗಿ ಹೇಳಿದ್ದರು. ಸದ್ಯ, ಸಿಎಸ್‌ಕೆ ಚೆನ್ನೈನಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸೆಣಸಾಟ ನಡೆಸಲಿದೆ.

 

2021ರಲ್ಲಿ ಧೋನಿ ಹೇಳಿದ್ದೇನು?

 

‘ನಾನು ಯಾವಾಗಲೂ ನನ್ನ ಕ್ರಿಕೆಟ್ ಬಗ್ಗೆ ಯೋಜನೆ ರೂಪಿಸಿಕೊಂಡಿರುತ್ತೇನೆ. ನಾನು ಭಾರತಕ್ಕಾಗಿ ಕೊನೆಯ ಏಕದಿನ ಪಂದ್ಯ ಆಡಿದ್ದು ರಾಂಚಿಯಲ್ಲಿ. ನನ್ನ ಕೊನೆಯ ಐಪಿಎಲ್ ಪಂದ್ಯ ಚೆನ್ನೈನಲ್ಲಿ ನಡೆಯಬೇಕು ಎಂದು ಆಶಿಸುತ್ತೇನೆ. ಮುಂದಿನ ವರ್ಷವೋ ಅಥವಾ ಐದು ವರ್ಷಗಳ ನಂತರವೋ, ಅದು ನಿಮಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದು ಹೇಳಿದ್ದರು. ಧೋನಿ ಅವರು ಈ ಹೇಳಿಕೆ ನೀಡಿ 5 ವರ್ಷವಾಗಿರುವುದರಿಂದ ಇಂದೇ ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯ ಆಡುತ್ತಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

 

ಧೋನಿ ಅವರ ಮಾಜಿ ಸಹ ಆಟಾಗಾರ ಆ‌ರ್. ಅಶ್ವಿನ್ ಅವರು ಮಾತನಾಡಿ ‘ಎಸ್‌ಆರ್‌ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಫಿಟ್ ಆಗಿದ್ದಾರೆ. ಹಾಗಾಗಿ ಅವರು ಮುಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

Team Udayaprabha
";