ಬೈಲಹೊಂಗಲ: ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಶ್ರೀಚಕ್ರ ಸಮೇತ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅಪರೂಪದ ಭಕ್ತಿ ವಾತಾವರಣ ಆವರಿಸಿಕೊಂಡಿದ್ದು, ದೇವಿಯ ಮಹಿಮೆ ಮತ್ತು ಕೃಪೆಗೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆ. ಸುಮಾರು 9 ತಿಂಗಳ ಹಿಂದೆ ಶ್ರೀಚಕ್ರ ಹಾಗೂ ಲಕ್ಷ್ಮೀ ಸಾಲಿಗ್ರಾಮವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅಂದಿನಿಂದ ಭಕ್ತರ ಕಷ್ಟ ಪರಿಹಾರವಾಗುತ್ತಿರುವ ಅನುಭವಗಳೊಂದಿಗೆ ಪ್ರತಿದಿನವೂ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಭಕ್ತರ ಹೃದಯದಲ್ಲಿ ಗಾಢ ನಂಬಿಕೆ, ದೇವಸ್ಥಾನ ಪರಿಸರದಲ್ಲಿ ಜೀವಂತ ಆಧ್ಯಾತ್ಮಿಕ ಶಕ್ತಿ – ಎಲ್ಲವೂ ಒಂದಾಗಿ ಈ ಕ್ಷೇತ್ರವನ್ನು ರಾಜ್ಯದ ಪ್ರಮುಖ ತೀರ್ಥಕ್ಷೇತ್ರವಾಗಿ ರೂಪಿಸುತ್ತಿವೆ.
ಬೈಲಹೊಂಗಲದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಮರಕುಂಬಿ ಗ್ರಾಮಕ್ಕೆ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಬೆಳಗ್ಗಿನ ಮುಂಜಾವಿನಿಂದಲೇ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ತಾಯಿಯ ದರ್ಶನ ಪಡೆಯುವ ದೃಶ್ಯ ಮನಮೋಹಕವಾಗಿದೆ. ಹರಕೆ ಸಾಮಗ್ರಿಗಳೊಂದಿಗೆ, ಭಕ್ತಿಭಾವ ತುಂಬಿದ ಮುಖಗಳಲ್ಲಿ ತಾಯಿಯ ಮೇಲಿನ ಅಪಾರ ನಂಬಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಇಲ್ಲಿ ಭಕ್ತರು ದೇವಿಗೆ ಅಕ್ಕಿ ಸೇವೆ, ಉಪ್ಪಿನ ಸೇವೆ, ಸಲ್ಲಿಸಿ, ಬೆಲ್ಲದ ಆರತಿ ನೆರವೇರಿಸುವುದರೊಂದಿಗೆ “ಅಕ್ಕಿ ಗಂಟಿನ ಅರಿವೆ”ಯನ್ನು ಬನ್ನಿ ಗಿಡಕ್ಕೆ ಕಟ್ಟುವ ವಿಶಿಷ್ಟ ಆಚರಣೆಯನ್ನು ಅನುಸರಿಸುತ್ತಿದ್ದಾರೆ. ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಗಾಢ ನಂಬಿಕೆಯೊಂದಿಗೆ ಈ ಪದ್ಧತಿಯನ್ನು ಭಕ್ತರು ಶ್ರದ್ಧೆಯಿಂದ ಪಾಲಿಸುತ್ತಿದ್ದಾರೆ. ದೇವಿಯ ಕೃಪೆಯಿಂದ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸಿದ್ದಾಗಿ ಹೇಳುವ ಅನೇಕ ಭಕ್ತರು, ಕೃತಜ್ಞತೆಯೊಂದಿಗೆ ಮತ್ತೊಮ್ಮೆ ದರ್ಶನಕ್ಕೆ ಆಗಮಿಸುತ್ತಿರುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ.
ಈ ಕುರಿತು ಭೂದಾನಿ ಮಹಾಂತೇಶ ಕೌಜಲಗಿ, ರಾಹುಲ ಕೌಜಲಗಿ ಅವರು ಮಾತನಾಡಿ, ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಕುರಿತು ವಿವರಿಸಿದರು. ಕ್ಷೇತ್ರದ ವಿಶೇಷತೆಯಾಗಿ ದಿನದ 24 ಗಂಟೆಯೂ ನಿರಂತರ ಅನ್ನದಾಸೋಹ ವ್ಯವಸ್ಥೆ ಇರುವುದನ್ನು ತಿಳಿಸಿದರು. ಯಾವುದೇ ಸಮಯದಲ್ಲಾದರೂ ಭಕ್ತರು ಅನ್ನಪ್ರಸಾದ ಸ್ವೀಕರಿಸಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇದಲ್ಲದೆ, ವಿಶ್ವದಲ್ಲಿಯೇ ಅತಿ ಎತ್ತರದ 179 ಅಡಿ ಶಿವಲಿಂಗದ ಪ್ರತಿಷ್ಠಾಪನಾ ಕಾಮಗಾರಿ ಈಗಾಗಲೇ ಆರಂಭ ವಾಗಿದೆ.ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜಸೇವೆಯನ್ನೂ ದೇವಾಲಯ ಆಡಳಿತ ಮಹತ್ವದಿಂದ ಕೈಗೊಂಡಿದೆ. ಸರ್ಕಾರಿ ಶಾಲೆಯನ್ನು ದತ್ತು ಪಡೆದು ಮೂಲಸೌಕರ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕೆರೆಗಳ ಪುನರ್ಜೀವನ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಶಕ್ತಿ ಪೀಠವಾಗಿರುವ ಮರಕುಂಬಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರ ನಂಬಿಕೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು, ಕ್ಷೇತ್ರದ ಮಹತ್ವ ಮತ್ತಷ್ಟು ಹೆಚ್ಚಾಗುತ್ತಿದೆ. 2013ರಲ್ಲಿ ದೇವಸ್ಥಾನ ನಿರ್ಮಾಣವಾದ ಬಳಿಕ, ಸುಮಾರು 9 ತಿಂಗಳ ಹಿಂದೆ ಶ್ರೀ ಚಕ್ರ ಹಾಗೂ ಶ್ರೀ ಲಕ್ಷ್ಮೀ ಸಾಲಿಗ್ರಾಮ ಪ್ರತಿಷ್ಠಾಪನೆ ನಡೆದಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಶ್ರೀ ಚಕ್ರವು ಆದಿ ಶಕ್ತಿಯ ದಿವ್ಯ ಸಂಕೇತವಾಗಿದ್ದು, ಬ್ರಹ್ಮಾಂಡದ ಸೃಷ್ಟಿ–ಸ್ಥಿತಿ–ಲಯಗಳ ಪ್ರತಿರೂಪವೆಂದು ಶಾಸ್ತ್ರಗಳು ವಿವರಿಸುತ್ತವೆ. ಶಕ್ತಿ ಪೀಠದಲ್ಲಿ ಶ್ರೀ ಚಕ್ರ ಪ್ರತಿಷ್ಠಾಪನೆಯಾಗಿರುವುದರಿಂದ ಕ್ಷೇತ್ರವು ಅತ್ಯಂತ ಜಾಗೃತವಾಗಿದ್ದು, ದೇವಿಯ ಕೃಪೆಯಿಂದ ಭಕ್ತರಿಗೆ ಆರೋಗ್ಯ, ಐಶ್ವರ್ಯ, ಮನಶಾಂತಿ ಹಾಗೂ ಕುಟುಂಬ ಕಲ್ಯಾಣ ಲಭಿಸುತ್ತಿದೆ ಎಂಬ ನಂಬಿಕೆ ಇದೆ.
ಇದೊಂದಿಗೇ ಪ್ರತಿಷ್ಠಾಪಿತವಾಗಿರುವ ಶ್ರೀ ಲಕ್ಷ್ಮೀ ಸಾಲಿಗ್ರಾಮವು ಲಕ್ಷ್ಮೀ–ನಾರಾಯಣರ ಐಕ್ಯ ರೂಪವೆಂದು ಭಕ್ತರು ಭಾವಿಸಿದ್ದು, ಇದು ಐಶ್ವರ್ಯ, ಸೌಭಾಗ್ಯ ಮತ್ತು ದಾರಿದ್ರ್ಯ ನಿವಾರಣೆಯ ಸಂಕೇತವಾಗಿದೆ. ಶಕ್ತಿ ಪೀಠದಲ್ಲಿ ಲಕ್ಷ್ಮೀ ಸಾಲಿಗ್ರಾಮ ಪ್ರತಿಷ್ಠಾಪನೆಯಾಗಿರುವುದು ಅಪರೂಪದ ಸಂಯೋಗವಾಗಿದ್ದು, ಶಕ್ತಿ ಹಾಗೂ ಶ್ರೀ ಎರಡರ ಆಶೀರ್ವಾದ ಒಂದೇ ಸ್ಥಳದಲ್ಲಿ ಲಭ್ಯವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದೇವಿಯ ದರ್ಶನ ಪಡೆದ ಬಳಿಕ ಬೇಡಿದ ವರ ಸಿದ್ಧಿಸಿದ ಅನೇಕ ಭಕ್ತರು ಹರಕೆ ತೀರಿಸುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದ್ದು, ದೂರದೂರಿನಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಯುವಕರ ಪಡೆ ದೇವಿಯ ಸೇವೆಗೆ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದೆ.
ಜ.5, 6 ಮತ್ತು 7 ರಂದು ನಡೆಯಲಿರುವ ಶ್ರೀ ಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ದೇವರ ಪಲ್ಲಕ್ಕಿ ಉತ್ಸವ, ಚಂಡಿಕಾ ಹೋಮ, ಸಾಮೂಹಿಕ ವಿವಾಹ, ಅಂಬಾರಿ ಮೆರವಣಿಗೆ, ವಿಶೇಷ ದೀಪಾಲಂಕಾರ ಹಾಗೂ ವೈಭವೋಪೇತ ಕಾರ್ಯಕ್ರಮಗಳು ಜರುಗಲಿವೆ.
ಒಟ್ಟಾರೆ, ಮರಕುಂಬಿಯ ಚಾಮುಂಡೇಶ್ವರಿ ಕ್ಷೇತ್ರ ಇಂದು ಭಕ್ತಿಯ ಶಕ್ತಿಕೇಂದ್ರವಾಗಿ ರೂಪುಗೊಂಡಿದ್ದು, ಉತ್ತರ ಕರ್ನಾಟಕದ ಧಾರ್ಮಿಕ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಗ್ರಾಮೀಣ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಗಾಗಿ “ನಮ್ಮ ಗ್ರಾಮ – ನಮ್ಮ ನೈರ್ಮಲ್ಯ” ಸ್ವಚ್ಛತಾ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಈ ಎಲ್ಲ ಕಾರ್ಯಗಳ ಮೂಲಕ ಮರಕುಂಬಿಯ ಶ್ರೀಚಕ್ರ ಸಮೇತ ಶ್ರೀ ಚಾಮುಂಡೇಶ್ವರಿ ಕ್ಷೇತ್ರವು ಭಕ್ತಿ, ಅನ್ನದಾನ, ಸಮಾಜಸೇವೆ ಮತ್ತು ಪರಿಸರ ಕಾಳಜಿಯನ್ನು ಒಟ್ಟುಗೂಡಿಸಿಕೊಂಡ ಅಪರೂಪದ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ.
ದೇವಿಯ ದರ್ಶನ ಪಡೆದ ಭಕ್ತರು ನೆಮ್ಮದಿ ಮತ್ತು ತೃಪ್ತಿಯೊಂದಿಗೆ ಮನೆಗೆ ಹಿಂತಿರುಗುತ್ತಿರುವುದು ಈ ಕ್ಷೇತ್ರದ ಮಹಿಮೆಗೆ ಜೀವಂತ ಸಾಕ್ಷಿಯಾಗಿದೆ.


,


















